ಕಾಂಗ್ರೆಸ್‌ಗೆ ಕ್ಯಾನ್ಸರ್ ರೋಗವಿದೆ, ಅದಕ್ಕೆ ಚಿಕಿತ್ಸೆಯೇ ಇಲ್ಲ ಎಂದ ಸಚಿವ ಈಶ್ವರಪ್ಪ

Update: 2021-05-29 16:31 GMT

ಶಿವಮೊಗ್ಗ, ಮೇ 29: ಕಾಂಗ್ರೆಸ್ ತಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಮೊದಲು ಮುಚ್ಚಿಕೊಳ್ಳಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲೇ ಕ್ಯಾನ್ಸರ್ ರೋಗವಿದ್ದರೂ ಕೂಡ ಬಿಜೆಪಿಯಲ್ಲಿ ರೋಗವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ತನ್ನಲ್ಲಿರುವ ಹುಳುಕುಗಳನ್ನು ಮೊದಲು ಮುಚ್ಚಿಕೊಳ್ಳಲಿ. ಮೂರು ಮೂರು ಮುಖ್ಯಮಂತ್ರಿಗಳನ್ನು ಹೊಂದಿದ ಉದಾಹರಣೆ ಆ ಪಕ್ಷಕ್ಕೆ ಇವೆ. ವೀರೇಂದ್ರ ಪಾಟೀಲ್ ರಂತಹ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ ಕೇಳಿದ ಗುಂಪುಗಾರಿಕೆ ಅವರದು. ಇಂತಹವರು ನಮಗೆ ರೋಗವಿದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.  

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್ 28 ಸ್ಥಾನಗಳಲ್ಲಿ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈಗ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಸಚಿವರು ಮಾತನಾಡಿದರೆ ಅದನ್ನ ರೋಗ ಎನ್ನುವುದಾದರೆ ಕಾಂಗ್ರೆಸ್‌ಗೆ ಕ್ಯಾನ್ಸರ್ ರೋಗವಿದೆ ಎಂದು ಬಣ್ಣಿಸಿದರು.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆನೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಅಧಿಕಾರದಿಂದ ಬಿದ್ದು ಹೋಗಲು ಕಾಂಗ್ರೆಸ್ ಪಕ್ಷವೇ ಕಾರಣ. ಬಿಜೆಪಿಯಲ್ಲಿ ರೋಗವಿದೆ ಎಂದು ಹುಡುಕವಂತ ಕೆಲಸ ಮಾಡ್ತಿದ್ದಾರಲ್ಲ, ಇದಕ್ಕೆ ಕೇಂದ್ರ ನಾಯಕರು ಇದ್ದಾರೆ. ಪರಿಹಾರ ಕಂಡುಹಿಡಿಯುತ್ತಾರೆ ಎಂದು ತಿಳಿಸಿದರು.

ಸಚಿವ ರಮೇಶ್ ಜಾರಕಿಹೊಳೆಯ ಸಿಡಿ ಪ್ರಕರಣವನ್ನ ಬಿಜೆಪಿ ಸೀರಿಯಸ್ ಆಗಿ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಾಗ ಇವರೇನು ಮಾಡಿದ್ದು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿದವರನ್ನು ಬಜಾವ್ ಮಾಡಿಲ್ಲವೆಂದು ಬಹಿರಂಗವಾಗಿ ಅವರು ಹೇಳಲಿ ಎಂದು ಸವಾಲೆಸೆದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಚಿವರು ಮತ್ತು ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನ ಮೆಚ್ಚುವಂತೆ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್‌ನ ಡಿಕೆಶಿ ಮತ್ತು ಸಿದ್ದರಾಮಯ್ಯನವರು ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಆರಂಭಿಸಿದ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳಬೇಡಿ ಎಂದು ಜನರನ್ನು ದಿಕ್ಕು ತಪ್ಪಿಸಿಲ್ಲವೆಂದು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಸಹ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News