ಟೋಲ್ ಪ್ಲಾಝಾಗಳಲ್ಲಿ ಕಾಯುವಿಕೆಯ ಅವಧಿ 10 ಸೆಕೆಂಡ್ ಮೀರಿದರೆ ಶುಲ್ಕ ಪಾವತಿಸಬೇಕಿಲ್ಲ ಎಂಬ ನಿಯಮ ನಿಮಗೆ ಗೊತ್ತಿದೆಯೇ?

Update: 2021-05-30 13:21 GMT

2018ರಲ್ಲಿ ಅಂತರ್ಜಾಲದಲ್ಲಿ ಹರಿದಾಡಿದ್ದ ಕೆಲವು ವೀಡಿಯೊಗಳಲ್ಲಿ, ವಾಹನವು ಟೋಲ್ ಪ್ಲಾಝಾದ ಹಳದಿ ಗೆರೆಯ ಹಿಂದೆ ಕಾಯುತ್ತಿದ್ದರೆ ಆ ವಾಹನಕ್ಕೆ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಹೇಳಲಾಗಿತ್ತು. ಇಂತಹ ನಿಯಮವೊಂದು ಅಸ್ತಿತ್ವದಲ್ಲಿದೆ ಎನ್ನುವುದು ಟೋಲ್ ಪ್ಲಾಝಾದ ಸಿಬ್ಬಂದಿಗಳಿಗೆ ಗೊತ್ತಿರಲಿಲ್ಲ. ಹೀಗಾಗಿ ಇದು ವಾಹನಗಳ ಚಾಲಕರು ಮತ್ತು ಟೋಲ್ ಫ್ಲಾಝಾದ ಸಿಬ್ಬಂದಿಗಳ ನಡುವೆ ಜಗಳಗಳಿಗೂ ಕಾರಣವಾಗಿತ್ತು. ಆದರೆ ಈಗ ಈ ನಿಯಮವು ಜಾರಿಗೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ದಾಖಲೆಯೊಂದರಂತೆ ಚತುಷ್ಚಕ್ರ ವಾಹನಗಳಲ್ಲಿಯ ರಸ್ತೆ ಬಳಕೆದಾರರು ಟೋಲ್ ಫ್ಲಾಝಾಗಳಲ್ಲಿ 10 ಸೆಕೆಂಡ್ ಗಳಿಗಿಂತ ಹೆಚ್ಚು ಕಾಲ ಕಾದು ನಿಂತಿದ್ದರೆ ಅವರು ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಇದೇ ವೇಳೆ ಬೂತ್ ಪ್ರವೇಶಕ್ಕೆ ಮೊದಲು 100 ಮೀಟರ್ಗಳ ಅಂತರದಲ್ಲಿ ಹಳದಿ ಬಣ್ಣದ ಗೆರೆಯನ್ನು ಹಾಕುವಂತೆ ಟೋಲ್ ಪ್ಲಾಝಾಗಳಿಗೆ ಸೂಚಿಸಲಾಗಿದೆ. ಹಳದಿ ಗೆರೆಗಿಂತ ಹಿಂದೆ ವಾಹನಗಳಿದ್ದರೆ ಬೂತ್ ನಿರ್ವಾಹಕರು ಕಾರುಗಳು ಶುಲ್ಕವನ್ನು ಪಾವತಿಸದೆ ಮುಂದೆ ಸಾಗಲು ಅವಕಾಶ ನೀಡಬೇಕಾಗುತ್ತದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿಯ ಟೋಲ್ ಪ್ಲಾಝಾಗಳಲ್ಲಿ ಪೀಕ್ ಅವರ್ಗಳಲ್ಲಿಯೂ ಪ್ರತಿ ವಾಹನಕ್ಕೆ ಕಾಯುವಿಕೆಯ ಅವಧಿ 10 ಸೆಕೆಂಡ್ ಗಳನ್ನು ಮೀರದಂತಾಗಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಸದ್ಯಕ್ಕೆ ಟೋಲ್ ಪ್ಲಾಝಾಗಳಲ್ಲಿ, ವಿಶೇಷವಾಗಿ ಬಳಕೆದಾರರು ಫಾಸ್ಟ್ಯಾಗ್ ಗಳನ್ನು ಅಳವಡಿಸಿಕೊಂಡಿರುವುದರಿಂದ ಕಾಯುವ ಸಮಯವಿಲ್ಲ ಎಂದೂ ಸಚಿವಾಲಯದ ದಾಖಲೆ ಹೇಳಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್ಎಚ್ಎಐ) ಹೇಳಿಕೊಂಡಿರುವಂತೆ 2021, ಫೆಬ್ರವರಿ ಮಧ್ಯಭಾಗದಿಂದ ಟೋಲ್ ಫ್ಲಾಝಾಗಳಲ್ಲಿ ಶೇ.100ರಷ್ಟು ನಗದು ರಹಿತ ವಹಿವಾಟುಗಳು ನಡೆದಿವೆ. ಎನ್ಎಚ್ಎಐ ಟೋಲ್ ಫ್ಲಾಝಾಗಳಲ್ಲಿ ಫಾಸ್ಟ್ಯಾಗ್ ಗಳ ಒಟ್ಟಾರೆ ಪ್ರವೇಶ ಪ್ರಮಾಣ ಶೇ.96ನ್ನು ತಲುಪಿದ್ದು, ಕೆಲವು ಕಡೆಗಳಲ್ಲಿ ಅದು ಶೇ.99ರಷ್ಟಿದೆ.

ಬೂತ್ ನಿರ್ವಹಣೆ ಸಿಬ್ಬಂದಿ ಮತ್ತು ಬಳಕೆದಾರರ ನಡುವೆ ಕನಿಷ್ಠ ಸಂಪರ್ಕವಿರುವುದರಿಂದ ಫಾಸ್ಟ್ಯಾಗ್ ಈ ಕೊರೋನ ಕಾಲದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗಿದೆ. ಆದರೆ ಮೇಲೆ ಹೇಳಲಾಗಿರುವ ನಿಯಮದ ಅನುಷ್ಠಾನ ಸಮಸ್ಯೆಯಾಗಬಹುದು. ಅದು ಕ್ಯಾಷ್ ಲೇನ್ ನಲ್ಲಿ ಮಾತ್ರ ಕೆಲಸ ಮಾಡುತ್ತದೆಯೇ ಹೊರತು ಫಾಸ್ಟ್ಯಾಗ್ ಲೇನ್ ನಲ್ಲಿ ಅಲ್ಲ. ಏಕೆಂದರೆ ಫಾಸ್ಟ್ಯಾಗ್ ಲೇನ್ ನಲ್ಲಿ ಕಾರು ಟೋಲ್ ಕಿಡಕಿಯನ್ನು ತಲುಪುತ್ತಿದ್ದಂತೆಯೇ ಅಲ್ಲಿರುವ ಸಿಸ್ಟಮ್ ಶುಲ್ಕವನ್ನು ಆಟೊಮ್ಯಾಟಿಕ್ ಆಗಿ ಕಡಿತಗೊಳಿಸುತ್ತದೆ. ಇದನ್ನು ನಿಲ್ಲಿಸಲು ಬೂತ್ ನಿರ್ವಾಹಕ ನಿರ್ಧರಿಸಲು ಏನಾದರೂ ಮಾರ್ಗವಿದ್ದರೆ ಫಾಸ್ಟ್ಯಾಗ್ ಲೇನ್ ನಲ್ಲಿಯೂ ಈ ನಿಯಮ ಕೆಲಸ ಮಾಡುತ್ತದೆ. ಆದರೆ ಹೀಗೆ ಮಾಡುವ ಮೂಲಕ ನಿರ್ವಾಹಕ ತನ್ನ ಕಂಪನಿಗೆ ನಷ್ಟವನ್ನುಂಟು ಮಾಡುತ್ತಾನೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಇಂತಹ ನಿಯಮವೊಂದು ಅಸ್ತಿತ್ವದಲ್ಲಿದೆ ಎಂದು ಬಳಕೆದಾರರೇ ಬೂತ್ ನಿರ್ವಾಹಕನಿಗೆ ತಿಳಿಸಬೇಕೇ ಅಥವಾ ಈ ನಿಯಮದ ಬಗ್ಗೆ ತಮ್ಮ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಟೋಲ್ ಪ್ಲಾಝಾಗಳ ಹೊಣೆಗಾರಿಕೆಯಾಗಿದೆಯೇ ಎನ್ನುವುದು ಅಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News