ಮೈಸೂರು: ಪುತ್ರನ ಔಷಧಿಗಾಗಿ 300 ಕಿ.ಮೀ. ಸೈಕಲ್ ತುಳಿದ ತಂದೆ

Update: 2021-05-31 17:04 GMT

ಮೈಸೂರು,ಮೇ.31: ಲಾಕ್ ಡೌನ್ ನಿಂದಾಗಿ  ತನ್ನ ವಿಕಲಾಂಗ ಪುತ್ರನ ಔಷಧಿಗಾಗಿ ತಂದೆ 300 ಕಿ.ಮೀ. ಸೈಕಲ್ ತುಳಿದು ಔಷಧಿ ತಂದ ಮನಕುಲುಕವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಟಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಗಾಣಿಗನಕೊಪ್ಪಲು ಗ್ರಾಮದ ಗಾರೆ ಕೆಲಸ ಮಾಡುವ ಆನಂದ್(45) ಬೆಂಗಳೂರಿಗೆ ತೆರಳಿ ನಿಮ್ಹಾನ್ಸ್ ನಿಂದ ಔಷಧಿ ತಂದಿದ್ದಾರೆ.

ಆನಂದ್ ಅವರ 10 ವರ್ಷದ ಪುತ್ರ ಮಾನಸಿಕ ವಿಕಲಾಂಗನಾಗಿದ್ದು, ಆತನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಮ್ಮೆ ಆಸ್ಪತ್ರೆಗೆ ಹೋದರೆ ಎರಡು ತಿಂಗಳಿಗಾಗುವಷ್ಟು ಔಷಧ ತರಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೊರೋನ ಮತ್ತು ಲಾಕ್‍ಡೌನ್ ನಿಂದಾಗಿ ಬೆಂಗಳೂರಿಗೆ ಹೋಗಲು ಆಗಿರಲಿಲ್ಲ, ಹಾಗಾಗಿ ಔಷಧ ಕಡಿಮೆಯಾಗುತ್ತಾ ಬಂತು.  ತಮ್ಮ ಮಗನಿಗೆ ಬೇಕಾದ ಔಷಧ ಸ್ಥಳೀಯವಾಗಿ ಎಲ್ಲೂ ಸಿಗಲಿಲ್ಲ. ತನ್ನ ಪುತ್ರನಿಗೆ 18 ವರ್ಷ ವಯಸ್ಸಿನವರೆಗೂ ಔಷಧ ನೀಡಬೇಕಾಗಿರುವ ಹಿನ್ನಲೆಯಲ್ಲಿ, ಮೇ.23 ರಂದು ತನ್ನ ಬೈಸಿಕಲ್ ನಲ್ಲಿ ಬನ್ನೂರು,ಮಳವಳ್ಳಿ, ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಸೈಕಲ್ ತುಳಿದಿದ್ದಾರೆ. 

ಈ ಮಧ್ಯೆ ಹಸಿದ ಹೊಟ್ಟೆಯಲ್ಲಿ ಕಂಗೆಟ್ಟಿದ ಆನಂದ್ ಅವರು ಕನಕಪುರದ ದೇವಾಲಯವೊಂದರಲ್ಲಿ ತಂಗಿ ರಾತ್ರಿ 10 ಗಂಟೆಗೆ ಬೆಂಗಳೂರಿನ ಬನಶಂಕರಿ ತಲುಪಿ ಅಪರಿಚಿತರ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಇದರಿಂದ ಮರುಗಿದ ಅವರು ಉಳಿಯಲು ಸ್ಥಳ ಹಾಗೂ ಊಟ ನೀಡಿದ್ದಾರೆ. ಬೆಳಿಗ್ಗೆ ಎದ್ದು ನಿಮ್ಹಾನ್ಸ್ ಗೆ  ಹೋಗಿ ಔಷಧಿ ತೆಗೆದುಕೊಂಡು ಆನಂದ್ ಅವರು ತಾವು ಬೈಸಿಕಲ್‍ನಲ್ಲಿ ಬನ್ನೂರಿನಿಂದ ಬಂದಿರುವುದಾಗಿ ವೈದ್ಯರ ಬಳಿ ಹೇಳಿದ್ದಾರೆ.

ಆನಂದ್ ಪರಿಸ್ಥಿತಿ ಕಂಡು ಮರುಗಿದ ವೈದ್ಯರು ಆನಂದ್ ಅವರಿಗೆ ಒಂದು ಸಾವಿರ ರೂಪಾಯಿ ಕೊಟ್ಟು ಕಳುಹಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಬೆಂಗಳುರು ಬಿಟ್ಟ ಆನಂದ್ ಮತ್ತೆ ಸಂಜೆ 4 ಗಂಟೆಗೆ ತಮ್ಮ ಊರು ತಲುಪಿದ್ದಾರೆ ಎಂದು ತಿಳಿದು ಬಂದಿದೆ.

ಆನಂದ್ ಅವರು ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಜೊತೆಗೆ ಗಾಣಿಗನ ಕೊಪ್ಪಲು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News