ಸೆಂಟ್ರಲ್‌ ವಿಸ್ತ ಯೋಜನೆ ಮುಂದುವರಿಕೆ ಕುರಿತ ದಿಲ್ಲಿ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಗೆ ಅರ್ಜಿ

Update: 2021-06-02 11:48 GMT

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್‌ ಸಾಂಕ್ರಾಮಿಕದ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಸೆಂಟ್ರಲ್‌ ವಿಸ್ತ ಯೋಜನೆಯನ್ನು ಮುಂದುವರಿಸಬೇಕೆಂದು ದಿಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು bar&bench ಬುಧವಾರ ವರದಿ ಮಾಡಿದೆ.

ಸೋಮವಾರ ಈ ಕುರಿತು ವಿಚಾರಣೆ ನಡೆಸಿದ್ದ ದಿಲ್ಲಿ ಹೈಕೋರ್ಟ್‌, "ಸೆಂಟ್ರಲ್‌ ವಿಸ್ತ ರಾಷ್ಟ್ರೀಯ ಪ್ರಾಮುಖ್ಯತೆಯ ಅಗತ್ಯ ಯೋಜನೆ" ಎಂದು ಅಭಿಪ್ರಾಯಪಟ್ಟಿತ್ತು. ಇದೊಂದು ʼʼಪ್ರೇರಿತ ಮೊಕದ್ದಮೆʼಯಾಗಿದ್ದು ಎಂದು ಅರ್ಜಿದಾರರಿಗೆ ನ್ಯಾಯಾಲಯವು ಒಂದು ಲಕ್ಷ ರೂ. ದಂಡ ವಿಧಿಸಿತ್ತು. 

ಈ ಕುರಿತಾದಂತೆ ಪ್ರದೀಪ್‌ ಕುಮಾರ್‌ ಯಾದವ್‌ ಎಂಬವರು ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದು,  ಸೆಂಟ್ರಲ್‌ ವಿಸ್ತ ಯೋಜನ್ಯನ್ನು ಅಗತ್ಯ ಚಟುವಟಿಕೆ ಎಂದು ಪರಿಗಣಿಸುವ ಹೈಕೋರ್ಟ್‌ ನ ನಿರ್ಧಾರವು ಕೊರೋನ ಸಾಂಕ್ರಾಮಿಕದ ಬಿಕ್ಕಟ್ಟಿನ ಮಧ್ಯೆ ಸಮರ್ಥನೀಯವಿಲ್ಲ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ, 2021 ನವೆಂಬರ್‌ ಈ ಯೋಜನೆಯ ಗಡುವಾಗಿದೆ ಎಂಬ ಹೈಕೋರ್ಟ್‌ ನ ವೀಕ್ಷಣೆಯ ಕುರಿತು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

"ಜನರ ಜೀವಗಳನ್ನು ರಕ್ಷಿಸುವ ಅತೀದೊಡ್ಡ ಆಸಕ್ತಿಯೊಂದಿಗೆ ಹೋಲಿಸಿದರೆ, ಸೆಂಟ್ರಲ್‌ ವಿಸ್ತ ನಿರ್ಮಾಣಕ್ಕಾಗಿ ನೀಡಿರುವ ಗಡುವಿನ  ದಿನಾಂಕದ ಪಾವಿತ್ರ್ಯತೆಯು ಯಾವುದೇ ಅರ್ಥ, ಪ್ರಸ್ತುತತೆ ಅಥವಾ ಪ್ರಾಮುಖ್ಯತೆಯನ್ನು ಹೊಂದಿರುವುದಿಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ಯೋಜನೆಯಲ್ಲಿ ಭಾಗಿಯಾಗಿರುವ ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿ ಉಳಿಯುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News