ತಾಯಿ, ಸಹೋದರಿಯನ್ನು ಕೋವಿಡ್ ನಿಂದ ಕಳೆದುಕೊಂಡಾಗ ಸಂಪೂರ್ಣ ಕುಸಿದುಹೋದೆ: ವೇದಾ ಕೃಷ್ಣಮೂರ್ತಿ

Update: 2021-06-02 13:01 GMT

ಹೊಸದಿಲ್ಲಿ: ಇತ್ತೀಚೆಗೆ ಕೋವಿಡ್ -19 ಗೆ ತಾಯಿ ಹಾಗೂ  ಸಹೋದರಿಯನ್ನು ಕಳೆದುಕೊಂಡ ನಂತರ ನಾನು "ಸಂಪೂರ್ಣವಾಗಿ ನಾಶವಾದೆ’’ ಎಂದಿರುವ   ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಿಧಾನವಾಗಿ ಆ ದುಃಖದಿಂದ ದೂರವಿರಲು ಕಲಿಯುತ್ತಿದ್ದೇನೆ ಹಾಗೂ  ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ  ಅತ್ಯಂತ ಮುಖ್ಯ ಎಂದು  ಒತ್ತಿ ಹೇಳಿದರು.

ವೇದಾ ಕೃಷ್ಣಮೂರ್ತಿಯವರ ಕುಟುಂಬದ ಒಂಬತ್ತು ಸದಸ್ಯರು ಕೊರೋನ ಕಾಯಿಲೆಯ ವಿರುದ್ಧ ಹೋರಾಡಿದ್ದರು. ವೇದಾ ಅವರ ತಾಯಿ ಹಾಗೂ  ಸಹೋದರಿ ಕಳೆದ ತಿಂಗಳು ಎರಡು ವಾರಗಳಲ್ಲಿ ಕಡೂರಿನಲ್ಲಿ ನಿಧನರಾದರು.

"ಹಣೆಬರಹದ ಬಗ್ಗೆ  ನಾನು ತುಂಬಾ ನಂಬಿಕೆಯುಳ್ಳವಳಾಗಿದ್ದೇನೆ., ಆದರೆ ನನ್ನ ಸಹೋದರಿ  ಮನೆಗೆ ಹಿಂತಿರುಗಬಹುದೆಂದು ನಾನು ನಿಜವಾಗಿಯೂ ಆಶಿಸಿದ್ದೆ. ಆಕೆ ವಾಪಸ್ ಬಾರದಿದ್ದಾಗ, ನಾನು ಸಂಪೂರ್ಣವಾಗಿ ನಾಶವಾದೆ. ನಾವೆಲ್ಲರೂ ಸಂಪೂರ್ಣವಾಗಿ ಕುಸಿದಿದ್ದೇವೆ" ಎಂದು ಕೃಷ್ಣಮೂರ್ತಿ ' ಇಎಸ್ ಪಿಎನ್ ಕ್ರಿಕ್ ಫೋಗೆ ನೀಡಿದ ಸಂದರ್ಶನದಲ್ಲಿ ನೋವು ತೋಡಿಕೊಂಡರು.

ನನ್ನ  ಕುಟುಂಬದ ಉಳಿದವರಿಗಾಗಿ ನಾನು  ಧೈರ್ಯಶಾಲಿಯಾಗಿ ಇರಬೇಕಾಗಿತ್ತು. ಆ ಪರೀಕ್ಷೆಯ ಒಂದೆರಡು ವಾರಗಳಲ್ಲಿ ನಾನು  ನನ್ನ ದುಃಖದಿಂದ  ಹೊರ ಬರಲು ಕಲಿತೆ. ನೋವು ನಿಮ್ಮನ್ನು  ಬಿಡುವುದಿಲ್ಲ. ಅದು ಮತ್ತೆ ನಮ್ಮನ್ನು ಕಾಡುತ್ತಲ್ಲೇ ಇರುತ್ತದೆ’’ ಎಂದು ವೇದಾ ಹೇಳಿದರು.

ನಮ್ಮ  ಕುಟುಂಬದಲ್ಲಿ ನಾನೊಬ್ಬಳು ಮಾತ್ರ ಕೊರೋನ  ಸೋಂಕಿಗೆ ತುತ್ತಾಗಿಲ್ಲ ನನ್ನ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ  ಒದಗಿಸಿದೆ. ಆ ಸಮಯದಲ್ಲಿ  ಸಾಮಾನ್ಯ ಜನರಿಗೆ ಮೂಲಭೂತ ಆರೋಗ್ಯದ ಸೌಲಭ್ಯ ಪಡೆದುಕೊಳ್ಳಲು ಎಷ್ಟು ಕಷ್ಟವಾಗಬಹುದೆಂದು ಅರಿತುಕೊಂಡೆ ಎಂದರು.

ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸುವ ಮಾನಸಿಕ ಅಂಶ ಹಾಗೂ  ಅಂತಹ ಪ್ರಮಾಣದ ದುರಂತದ ಬಗ್ಗೆ ಮಾತನಾಡಿದ ಕೃಷ್ಣಮೂರ್ತಿ,  ಸೋಂಕಿಗೆ ತುತ್ತಾಗಿದ್ದ ತಾಯಿ ಹಾಗೂ  ಸಹೋದರಿ ಕೂಡ ಆತಂಕದಿಂದ ಬಳಲುತ್ತಿದ್ದರು ಎಂದರು.

" ಕೋವಿಡ್ ಎದುರಿಸಲು ಮಾನಸಿಕ ಶಕ್ತಿ ಬಹಳ ಮುಖ್ಯ. ನನ್ನ ಹಿರಿಯ ಸಹೋದರಿ ವತ್ಸಲಾ ಅವರು ಕೋವಿಡ್ ನಿಂದ ನಿಧನ ಹೊಂದುವ ಮೊದಲು ಭಾರೀ ಆತಂಕಕ್ಕೆ ಒಳಗಾಗಿದ್ದರು. ನನ್ನ ತಾಯಿ ಕೂಡ ಭಯಭೀತರಾಗಿರಬಹುದು, ಏಕೆಂದರೆ ಅವರು ವೈರಸ್‌ನಿಂದ ಸಾಯುವ ಹಿಂದಿನ ರಾತ್ರಿ  ಮಕ್ಕಳು ಸೇರಿ  ಕುಟುಂಬದ ಎಲ್ಲರೂ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಬಹುಶಃ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು "ಎಂದು ಅವರು ಹೇಳಿದರು.

48 ಏಕದಿನ ಹಾಗೂ  76 ಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವೇದಾ ಕೃಷ್ಣಮೂರ್ತಿಯವರನ್ನು ಈ ತಿಂಗಳ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡದಿಂದ ಹೊರಗಿಡಲಾಗಿದೆ. ಇಂಗ್ಲೆಂಡ್ ನಲ್ಲಿ ಭಾರತ ತಂಡವು ಒಂದು ಟೆಸ್ಟ್, ಮೂರು ಏಕದಿನ ಹಾಗೂ 3 ಟ್ವೆಂಟಿ -20 ಪಂದ್ಯಗಳನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News