ಬಿಜೆಪಿ ಲಸಿಕೆ ವಿಚಾರದಲ್ಲಿ ಜಾತಿ, ಧರ್ಮ ತರುತ್ತಿರುವುದು ಖಂಡನೀಯ: ರಕ್ಷಾ ರಾಮಯ್ಯ

Update: 2021-06-02 16:45 GMT

ಬೆಂಗಳೂರು, ಜೂ. 2: ಕೋವಿಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಂಡು ಜನರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಬಿಜೆಪಿ ನಾಯಕರು, ಇದೀಗ ಕೊರೋನ ಲಸಿಕೆ ವಿಚಾರದಲ್ಲಿ ಜಾತಿ, ಧರ್ಮ ತರುತ್ತಿರುವುದು ಖಂಡನೀಯ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

ಬುಧವಾರ ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಮಲ್ಲೇಶ್ವರಂ ಕ್ಷೇತ್ರದಲ್ಲಿ ದೇವಸ್ಥಾನಗಳ ಅರ್ಚಕರು ಮತ್ತು ಬ್ರಾಹ್ಮಣರ ಕುಟುಂಬ ಸದಸ್ಯರಿಗೆ ಪ್ರತ್ಯೇಕವಾಗಿ ಕೋವಿಡ್ ಲಸಿಕೆ ಶಿಬಿರ ಆಯೋಜಿಸಿದ್ದು, ಲಸಿಕೆಯಲ್ಲಿ ಜಾತಿ, ಧರ್ಮ ತಂದು ಭೇದ-ಭಾವ ಮಾಡುತ್ತಿರುವುದು ಅತ್ಯಂತ ಖಂಡನೀಯ. ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಕದ್ದು ಮುಚ್ಚಿ ಲಸಿಕೆ ಅಭಿಯಾನ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಒಂದು ಕಡೆ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಿ ಸಾವಿನ ಮನೆಯಲ್ಲೂ ಹಗಲು ದರೋಡೆ ಮೂಲಕ ಹಣ ಗಳಿಸುವ ಹೀನ ಕೆಲಸದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಸಿ.ವಿ.ರಾಮನ್ ನಗರದಲ್ಲಿ ಬಿಜೆಪಿ ಶಾಸಕ ಎಸ್.ರಘು ಸಾಮಾನ್ಯ ಜನರನ್ನು ನಿರ್ಲಕ್ಷಿಸಿ ಬಿಜೆಪಿ ಕಾರ್ಯಕರ್ತರಿಗೆ ಪ್ರತ್ಯೇಕ ಲಸಿಕಾ ಅಭಿಯಾನ ನಡೆಸಿದ್ದಾರೆ. ನಿಯಮಬದ್ಧವಾಗಿ ನೋಂದಣಿ ಮಾಡಿಕೊಂಡು ಸರತಿ ಸಾಲಿನಲ್ಲಿ ನಿಂತವರಿಗೆ ನೀಡಬೇಕಾಗಿದ್ದ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ವರ್ಗಾಯಿಸಿ ಘೋರ ಅಪರಾಧ ಮಾಡಿ ಜನ ಆಕ್ರೋಶಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ದಲಿತರಿಗೆ ಲಸಿಕೆ ನಿರಾಕರಿಸಿ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಿರುವುದು ನಿಜಕ್ಕೂ ಸರಿಯಲ್ಲ. ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಶ್ವತ್ಥ ನಾರಾಯಣ ಅವರು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ಕ್ರಮದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರು ದಾಖಲು

ತಾರತಮ್ಯ ಧೋರಣೆ ಅನುಸರಿಸಿ ಏನೂ ಆಗಿಯೇ ಇಲ್ಲ ಎನ್ನುವಂತೆ ಲಜ್ಜೆ ಬಿಟ್ಟು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳತ್ತಿರುವುದು ಖಂಡನೀಯ. ಸೋಂಕು ನಿಯಂತ್ರಣಕ್ಕೆ ಪ್ರಮುಖ ಅಸ್ತ್ರವಾಗಿರುವ ಲಸಿಕೆಯಲ್ಲೂ ಲಾಭ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಬಿಜೆಪಿಯವರು ಕೊರೋನ ವೈರಸ್‍ಗಿಂತಲೂ ಅಪಾಯಕಾರಿ ಎಂದು ರಕ್ಷಾ ರಾಮಯ್ಯ ಟೀಕಿಸಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲ್ಲೇಶ್ವರಂ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News