ಕೋವಿಡ್ ಸಂಕಷ್ಟ: 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

Update: 2021-06-03 14:36 GMT

ಬೆಂಗಳೂರು, ಜೂ.3: ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಹೇರಿರುವ ಕಠಿಣ ನಿರ್ಬಂಧದಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು, ಮೀನುಗಾರರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ನ್ಯಾಯವಾದಿಗಳು, ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್ ಮತ್ತು ಮುಅಝ್ಝಿನ್ ಗಳಿಗೆ ರಾಜ್ಯ ಸರಕಾರ ಒಟ್ಟು 500 ಕೋಟಿ ರೂ. ಗಳಷ್ಟು ಮೊತ್ತದ ಎರಡನೆ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಆರ್ಥಿಕ ನೆರವು ಘೋಷಣೆ ಮಾಡಿದ್ದು, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಪರಿಹಾರ ರೂಪದಲ್ಲಿ 2021ರ ಮೇ ಮತ್ತು ಜೂನ್ ತಿಂಗಳ ಮಾಸಿಕ ವಿದ್ಯುತ್ ಶುಲ್ಕವನ್ನು ವಿನಾಯಿತಿ ನೀಡಲಾಗುವುದು. ಎಂಎಸ್‍ಎಂಇ ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ ತಿಂಗಳ ಮಾಸಿಕ ವಿದ್ಯುತ್ ಬಿಲ್ ಪಾವತಿಸಲು ಜುಲೈ 30ರ ವರೆಗೆ ಮುಂದೂಡಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಒಟ್ಟು 120 ಕೋಟಿ ರೂ.ಗಳಷ್ಟು ಹೊರೆಯಾಲಿದೆ ಎಂದು ತಿಳಿಸಿದರು.

ವಿದ್ಯುತ್ ಮಗ್ಗಗಳ ನೇಕಾರರು: ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ 3 ಸಾವಿರ ರೂ.ನಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ರೂ.ವೆಚ್ಚವಾಗಲಿದೆ. ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾ 3 ಸಾವಿರ ರೂ.ನಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು 6.6 ಕೋಟಿ ರೂ. ವೆಚ್ಚವಾಗಲಿದೆ ಎಂದು ಯಡಿಯೂರಪ್ಪ ವಿವರಿಸಿದರು.

ಮೀನುಗಾರರಿಗೆ ಪರಿಹಾರ: ಕೇಂದ್ರ ಸರಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ 3 ಸಾವಿರ ರೂ.ಗಳ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ 5.6 ಕೋಟಿ ರೂ.ವೆಚ್ಚವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಅಲ್ಲದೆ, ಒಟ್ಟು 7,668 ಇನ್‍ಲ್ಯಾಂಡ್ ದೋಣಿ ಮಾಲಕರಿಗೆ ತಲಾ 3 ಸಾವಿರ ರೂ.ನಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ 2.3 ಕೋಟಿ ರೂ.ವೆಚ್ಚವಾಗಲಿದೆ. ಇದಲ್ಲದೆ ಮೀನುಗಾರರ ಸಂಘಗಳಿಂದ ಒಳನಾಡು ಮೀನುಗಾರಿಗೆಕೆ ಸರಕಾರಕ್ಕೆ ನೀಡಬೇಕಾಗಿರುವ ಕಾಂಟ್ರಾಕ್ಟ್ ಫೀಸ್‍ನಲ್ಲಿ ಶೇ.25 ರಿಯಾಯಿತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಇದೇ ವೇಳೆ ವಿವರಣೆ ನೀಡಿದರು.

ಇಮಾಮ್‍ಗಳಿಗೆ ನೆರವು: ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುವ ಪೇಶ್ ಇಮಾಮ್ ಮತ್ತು ಮುಅಝ್ಝಿನ್ ಗಳಿಗೆ ತಲಾ 3 ಸಾವಿರ ರೂ., ಜತೆಗೆ ಮುಜರಾಯಿ ಇಲಾಖೆಯ `ಸಿ' ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ 3 ಸಾವಿರ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ 10.8 ಕೋಟಿ ರೂ.ವೆಚ್ಚವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಅಂಗನವಾಡಿ, ಆಶಾಗಳಿಗೆ ಪರಿಹಾರ: ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡುವುದು ಸರಕಾರದ ಆದ್ಯ ಕರ್ತವ್ಯ. ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ 3 ಸಾವಿರ ರೂ.ಗಳ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾಗಳಿಗೆ ಸಹಾಯವಾಗಲಿದ್ದು ಅಂದಾಜು 12.75 ಕೋಟಿ ರೂ.ಖರ್ಚಾಗಲಿದೆ ಎಂದರು.

ಅದೇ ರೀತಿಯಲ್ಲಿ 64,423 ಅಂಗನವಾಡಿ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ ರೂ.ನಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರಕಾರಕ್ಕೆ ಅಂದಾಜು 24.7ಕೋಟಿ ರೂ.ವೆಚ್ಚವಾಗಲಿದೆ. ವಕೀಲರ ಕಲ್ಯಾಣ ನಿಧಿಗೆ 5 ಕೋಟಿ ರೂ.ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು ಎಂದು ತಿಳಿಸಿದರು.

ಮಕ್ಕಳಿಗೆ ಹಾಲಿನ ಪುಡಿ: `ಕೋವಿಡ್ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲ ಶಾಲೆಗಳು ಲಾಕ್‍ಡೌನ್‍ನಿಂದ ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ.ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರಕಾರಕ್ಕೆ ಅಂದಾಜು 100 ಕೋಟಿ ರೂ. ವೆಚ್ಚವಾಗಲಿದೆ'

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News