ಅಹಮದಾಬಾದ್: ಪೈಲಟ್ ತರಬೇತಿ ಪಡೆಯುತ್ತಿದ್ದ ಕೊಡಗಿನ ಯುವಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Update: 2021-06-05 08:45 GMT

ಮಡಿಕೇರಿ, ಜೂ.5: ಭವಿಷ್ಯದಲ್ಲಿ ಪೈಲಟ್ ಆಗಬೇಕೆನ್ನುವ ಕನಸಿನೊಂದಿಗೆ ತರಬೇತಿಯಲ್ಲಿ ತೊಡಗಿದ್ದ ಕೊಡಗಿನ ಯುವಕನೋರ್ವ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.

ಸುಂಟಿಕೊಪ್ಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾದಾಪುರದ ಜಂಬೂರುಬಾಣೆಯ ನಿವಾಸಿ ಬೋಪಯ್ಯ ಹಾಗೂ ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ(23) ಸಾವಿಗೀಡಾದ ಯುವಕ.

ಗುಜರಾತಿನ ಅಹಮದಾಬಾದ್ ನಲ್ಲಿ ಏರೋನಾಟಿಕ್ ಸೆಂಟರ್ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಬಿ ಬೋಪಯ್ಯ ಅವರು ಪ್ರತಿದಿನ ರಾತ್ರಿ ತಂದೆ, ತಾಯಿಯೊಂದಿಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರು. ಆದರೆ ಗುರುವಾರ ರಾತ್ರಿ ಕರೆ ಬಂದಿರಲಿಲ್ಲ, ಅಲ್ಲದೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲವೆಂದು ತಿಳಿದು ಬಂದಿದೆ.

ಶಿಬಿ ಅವರ ಸಹೋದರಿಗೆ ಶುಕ್ರವಾರ ತರಬೇತಿ ಕೇಂದ್ರದಿಂದ ಅಧಿಕಾರಿಗಳು ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 3 ತಿಂಗಳ ತರಬೇತಿಯಷ್ಟೇ ಬಾಕಿ ಉಳಿದಿದ್ದು, ಇದನ್ನು ಪೂರ್ಣಗೊಳಿಸಿದ್ದರೆ ಶಿಬಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದಿತ್ತು. ಆದರೆ ತರಬೇತಿ ಕೇಂದ್ರದ ಪಕ್ಕದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿಬಿ ಶವವಾಗಿ ಪತ್ತೆಯಾಗಿದ್ದಾರೆ.

ಸಂತೋಷದಿಂದಲೇ ಇದ್ದ ಶಿಬಿ ಸಾವಿಗೆ ಶರಣಾಗಲು ಹೇಗೆ ಸಾಧ್ಯ ಎಂದು ಪ್ರಕರಣದ ಬಗ್ಗೆ ಕುಟುಂಬ ವರ್ಗ ಸಂಶಯ ವ್ಯಕ್ತಪಡಿಸಿದೆ. ಈಗಾಗಲೇ ಪೋಷಕರು ಗುಜರಾತ್ ಕಡೆಗೆ ಪ್ರಯಾಣ ಬೆಳೆಸಿದ್ದು, ತಲುಪಿದ ನಂತರವಷ್ಟೇ ಸತ್ಯಾಂಶ ಗೊತ್ತಾಗಲಿದೆ.

ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News