ಈಡಿ ತನಿಖೆಗೆ ಹೆದರಿ ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ

Update: 2021-06-05 12:52 GMT

ವಿಜಯಪುರ, ಜೂ.5: ತಮ್ಮ ಮೇಲಿನ ಜಾರಿ ನಿರ್ದೇಶನಾಲಯ(ಈಡಿ) ತನಿಖೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಈಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ಹೊಸದಿಲ್ಲಿಯ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.

ಪಿಐ ಮೋಟಾರ್ಸ್ ಎನ್ನುವ ಕಂಪೆನಿಗೆ ಹಣ ಹೇಗೆ ವರ್ಗಾವಣೆಗೊಂಡಿತು ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಈ ಕಾರಣಕ್ಕಾಗಿ ವಿಜಯೇಂದ್ರ ಹೊಸದಿಲ್ಲಿಗೆ ಹೋಗಿ ಬಂದಿದ್ದಾರೆ ಎಂದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ನನಗೆ ಮಾಹಿತಿ ಬಂದಿದೆ ಎಂದರು.

ಮುಂದೆ ನಡೆಯುವ ಅನಾಹುತಗಳಿಗೆ ಕಾರಣವಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಯಡಿಯೂರಪ್ಪ ಅವರಿಗೆ ಹೇಳುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News