ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರಿಸಿದ್ದು ಹೀಗೆ...

Update: 2021-06-05 13:09 GMT

ಶಿವಮೊಗ್ಗ, ಜೂ.5: ಐಎಎಸ್ ಅಧಿಕಾರಿ ಶಿಲ್ಪ ನಾಗ್ ಉತ್ತಮ ಅಧಿಕಾರಿ. ನನ್ನ ಇಲಾಖೆಯಲ್ಲಿ ಇದ್ದಾಗ ಉತ್ತಮ ಕೆಲಸ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಐಎಎಸ್ ಅಧಿಕಾರಿಗಳ ಕಿತ್ತಾಟ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರೋಹಿಣಿ ಸಿಂಧೂರಿ ವಿರುದ್ಧ ಆಡಳಿತ ಪಕ್ಷದ ಸಂಸದರು ಸೇರಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಆರೋಪ ಮಾಡುತ್ತಿದ್ದಾರೆ. ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೆ, ಶಿಲ್ಪಾ ನಾಗ್ ನನ್ನ ಇಲಾಖೆಯಲ್ಲಿ ಇದ್ದಾಗ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪರೋಕ್ಷವಾಗಿ ಅಧಿಕಾರಿ ಶಿಲ್ಪಾನಾಗ್ ಪರ ಬ್ಯಾಟ್ ಬೀಸಿದರು.

ಶಿಲ್ಪಾನಾಗ್ ಕೇರಳಕ್ಕೆ ಹೋಗಿ ಅಲ್ಲಿನ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಅಧ್ಯಯನ ಮಾಡಿಕೊಂಡು ಬಂದಿದ್ದರು. ಅವರು ಒಳ್ಳೆಯ ಐಎಎಸ್ ಅಧಿಕಾರಿ ಎಂದಷ್ಟೇ ಹೇಳಬಲ್ಲೆ. ಆದರೂ, ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲಿದೆ ಎಂದರು.

ರಾಜಸ್ತಾನ-ಪಂಜಾಬ್ ಗೆ ಹೋಗಿ ಬರಲಿ: ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆರೋಪ ವಿಚಾರಕ್ಕೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಅವರದೇ ಪಕ್ಷ ಆಡಳಿತ ನಡೆಸುತ್ತಿರುವ ರಾಜಸ್ಥಾನ, ಪಂಜಾಬ್ ರಾಜ್ಯಗಳಿಗೆ ಹೋಗಿಬರಲಿ. ಅಲ್ಲಿ ಎಷ್ಟರ ಮಟ್ಟಿಗೆ ಕೊರೋನ ನಿಯಂತ್ರಣದಲ್ಲಿದೆ ಎಂದು ನೋಡಿಕೊಂಡು ಬರಲಿ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರಗಳು ಕೊರೋನ ನಿಯಂತ್ರಣಕ್ಕೆ ಸಾಕಷ್ಟು ಕೆಲಸ ಮಾಡುತ್ತಿವೆ ಆದರೆ, ವಿರೋಧ ಪಕ್ಷದವರು ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ. ಲಸಿಕೆ ವಿಚಾರದಲ್ಲೂ ಇಲ್ಲ ಸಲ್ಲದ ಆರೋಪ ಮಾಡಿದರು. ಹೀಗಾಗಿಯೇ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ರಾಜ್ಯದಲ್ಲಿ ಕೋವಿಡ್ ಹರಡಲು ಕಾಂಗ್ರೆಸ್ ನ ಅಪಪ್ರಚಾರವೇ ನೇರ ಕಾರಣ ಎಂದು ಸಚಿವ ಈಶ್ವರಪ್ಪ ಆರೋಪಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನ ನಿಯಂತ್ರಣಕ್ಕೆ ಬಂದಿದೆ. ಟಾಸ್ಕ್ ಫೋರ್ಸ್ ರಚಿಸಿದ್ದರ ಫಲವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ಡೀಸೆಲ್ ದರ ಏರಿಸುವುದು, ಇಳಿಸುವುದು ಕೇಂದ್ರ ಸರಕಾರದ ತೀರ್ಮಾನ. ಯಾಕೆ, ಏನು ಕಥೆ ಎಂದು ನನಗೆ ಗೊತ್ತಿಲ್ಲ. ಕೆಲವು ಸಂದರ್ಭದಲ್ಲಿ ಏರಿಸುತ್ತಾರೆ, ಕೆಲವು ಸಂದರ್ಭದಲ್ಲಿ ಇಳಿಸುತ್ತಾರೆ. ಕೇವಲ ಪೆಟ್ರೋಲ್ ಡೀಸೆಲ್ ಅಷ್ಟೇ ಅಲ್ಲ. ಎಲ್ಲಾ ಪದಾರ್ಥಗಳಿಗೆ ಈ ವ್ಯವಸ್ಥೆ ಇರುತ್ತೆ. ಕಾರಣಗಳು ಕೇಂದ್ರದ ಅರ್ಥ ಸಚಿವರಿಗೆ ಗೊತ್ತಿರುತ್ತೆ. ಆಡಳಿತ ನಡೆಸುವ ಸಂದರ್ಭದಲ್ಲಿ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News