ವಂಚನೆ ಪ್ರಕರಣ: ಜೆಎಎ ಲೈಫ್‍ಸ್ಟೈಲ್ ಇಂಡಿಯಾ ಕಂಪೆನಿ ನಿರ್ದೇಶಕನ ಬಂಧನ; 3.5 ಕೋಟಿ ರೂ. ಜಪ್ತಿ

Update: 2021-06-05 14:10 GMT
ಕೆ.ವಿ. ಜಾನಿ

ಬೆಂಗಳೂರು, ಜೂ.5: ಜಾಹೀರಾತು ನೆಪದಲ್ಲಿ ಹಣ ಜಮಾವಣೆ ಮಾಡಿಕೊಂಡು ಆನ್‍ಲೈನ್ ಆ್ಯಪ್ ಮೂಲಕ ವಂಚನೆ ಮಾಡುತ್ತಿದ್ದ ಕೆ.ವಿ. ಜಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 3.5 ಕೋಟಿ ರೂ. ಜಪ್ತಿ ಮಾಡಿದ್ದಾರೆ.

ಬಂಧಿತರ ಆರೋಪಿ ಕೆ.ವಿ.ಜಾನಿ, ಜೆಎಎ ಲೈಫ್‍ಸ್ಟೈಲ್ ಇಂಡಿಯಾ ಕಂಪೆನಿಯ ನಿರ್ದೇಶಕನಾಗಿದ್ದು, ಕೇರಳ ಮೂಲದ ಈತ ಇಲ್ಲಿನ ಬಸವೇಶ್ವರನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

''ಜಾನಿ ಸಾರ್ವಜನಿಕರಿಗೆ ಲಾಭದ ಆಮಿಷವೊಡ್ಡಿ ಸದಸ್ಯತ್ವದ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ. ಜತೆಗೆ, ಬೇರೆಯವರನ್ನೂ ಚೈನ್ ಲಿಂಕ್ ರೀತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಕಮಿಷನ್ ನೀಡುವುದಾಗಿಯೂ ಹೇಳಿ ನಂಬಿಕೆ ಹುಟ್ಟಿಸಿ ವಂಚನೆ ನಡೆಸುತ್ತಿದ್ದ. ಇದಕ್ಕಾಗಿ ಜೆಎಎ ಲೈಫ್ ಸ್ಟೈಲ್ ಹೆಸರಿನ ಜಾಲತಾಣ ಮಾಡಿಕೊಂಡು ಆರೋಪಿ ವಹಿವಾಟು ನಡೆಸುತ್ತಿದ್ದ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಕಂಪೆನಿ ಸದಸ್ಯತ್ವಕ್ಕೆಂದು 1,109 ರೂ. ಪಡೆಯುತ್ತಿದ್ದ. ತದನಂತರ, ಸಮಯ ಸಿಕ್ಕಾಗಲೆಲ್ಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ  240 ರೂ. ಸಿಗುತ್ತದೆ, ಇದೇ ರೀತಿಯಲ್ಲಿ ನಿತ್ಯವೂ ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು 7,200ರಿಂದ 86,400ರವರೆಗೂ ಹಣ ಸಂಪಾದಿಸಹುದು, ಹಣವೂ ಆನ್‍ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದೆಂದು ಆರೋಪಿ ನಂಬಿಸುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ನಂಬಿ 4 ಲಕ್ಷ ಮಂದಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದರು. ಆದರೆ, ಇತ್ತೀಚಿಗೆ ಆರೋಪಿ ಯಾವುದೇ ಹಣ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ನೊಂದ ಸಾರ್ವಜನಿಕರು, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News