ಬಳ್ಳಾರಿಯಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ: ಸಾರ್ವಜನಿಕರ ಆಕ್ರೋಶ

Update: 2021-06-06 15:58 GMT
ಸಾಂದರ್ಭಿಕ ಚಿತ್ರ

ಬಳ್ಳಾರಿ, ಜೂ.6: ಬಳ್ಳಾರಿಯಲ್ಲಿ ರವಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದರೆ, ವಿಜಯನಗರ ಜಿಲ್ಲೆಯಲ್ಲಿ ನೂರರ ಸಮೀಪಕ್ಕೆ ಬಂದಿದೆ. 

ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಬಳ್ಳಾರಿಯಾಗಿದ್ದು, ಬಳ್ಳಾರಿಯಲ್ಲಿ ರವಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 100.08 ಪೈಸೆಗೆ ಏರಿಕೆ ಕಂಡರೆ, ವಿಜಯನಗರ ಜಿಲ್ಲೆಯಲ್ಲಿ 99.45ಕ್ಕೆ ಹೆಚ್ಚಾಗಿದೆ. 

ಅವಳಿ ಜಿಲ್ಲೆಗಳಲ್ಲಿ ಕಳೆದ ವಾರ ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ಪ್ರತಿ ಲೀಟರ್‍ಗೆ 98.33 ಇತ್ತು. ಸತತ ನಾಲ್ಕು ವಾರಗಳಿಂದ ಏರಿಕೆಯ ಹಾದಿಯಲ್ಲಿದ್ದ ತೈಲ ದರ ಈ ವಾರ ನೂರರ ಗಡಿ ದಾಟಿ ಹೊಸ ದಾಖಲೆ ಬರೆದಿದೆ. 

ಪ್ರತಿ ಲೀಟರ್ ಡೀಸೆಲ್ ದರ  92.30 ರೂ. ಇದೆ. ಪೆಟ್ರೋಲ್ ದರ ಮೂರಂಕಿ ದಾಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕೊರೋನದಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡು, ವ್ಯಾಪಾರ ವಹಿವಾಟು ಮಾಡದೆ ಮನೆಯಲ್ಲಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸತತವಾಗಿ ತೈಲ ದರ ಹೆಚ್ಚಿಸುತ್ತಿರುವುದು ಖಂಡನಾರ್ಹ. ಆಡಳಿತ ನಡೆಸುತ್ತಿರುವವರು ಸಂವೇದನೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇಲ್ಲವಾದರೆ ತೈಲ ದರ ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದರು ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್ ಕುಮಾರ್ ಟೀಕಿಸಿದ್ದಾರೆ.

ತೈಲ ದರ ಏರಿಕೆಯಿಂದ ಹಣ್ಣು, ತರಕಾರಿ, ದಿನಸಿ ಸೇರಿ ಇತರೆ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಇದು ನೇರವಾಗಿ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತೈಲ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಪೆಟ್ರೋಲ್ ಬಂಕ್ ಮಾಲಕರೂ ಹೆಚ್ಚಿನ ಬಂಡವಾಳ ಹಾಕಬೇಕಾಗುತ್ತದೆ. ಬೆಲೆ ಹೆಚ್ಚಳದಿಂದ ಪರೋಕ್ಷ, ಅಪರೋಕ್ಷವಾಗಿ ಎಲ್ಲ ವಲಯದವರಿಗೂ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಸರಕಾರ ಕೂಡಲೇ ತೆರಿಗೆ ಕಡಿತ ಮಾಡಿ, ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೆಟ್ರೋಲ್ ಪಂಪ್ ಸಂಘದ ಕಾರ್ಯದರ್ಶಿ ಅಶ್ವಿನ್ ಕೊತಂಬ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News