ಆನೆಗಳ ಸಂಹಾರಕ್ಕೆ ಮುಂದಾದ ಝಿಂಬಾಬ್ವೆ: ಇತರ ಕಾಡು ಪ್ರಾಣಿಗಳ ಅಸ್ತಿತ್ವಕ್ಕೆ ಅಡ್ಡಿ?

Update: 2021-06-06 16:50 GMT
ಸಾಂದರ್ಭಿಕ ಚಿತ್ರ

ಹರಾರೆ (ಝಿಂಬಾಬ್ವೆ), ಜೂ. 6: ಆಫ್ರಿಕದಲ್ಲಿ ಆನೆಗಳ ಸಂತತಿ ದಿನೇ ದಿನೇ ಅಪಾಯಕಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಆದರೆ, ಝಿಂಬಾಬ್ವೆಯಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ.

ದೇಶದಲ್ಲಿ ಆನೆಗಳ ಸಂಖ್ಯೆ ಈಗ ಒಂದು ಲಕ್ಷಕ್ಕಿಂತ ಕೊಂಚ ಮೇಲಿದೆ ಎಂದು ಆಫ್ರಿಕ ಖಂಡದ ದಕ್ಷಿಣ ಭಾಗದ ದೇಶವಾಗಿರುವ ಝಿಂಬಾಬ್ವೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಇದು ಹಿಂದಿನ ಗಣತಿ ನಡೆದ 2014ರಲ್ಲಿ ಇದ್ದ 84,000ಕ್ಕಿಂತ ಹೆಚ್ಚಾಗಿದೆ. ಆದರೆ ದೇಶದಲ್ಲಿ ಆನೆಗಳ ಧಾರಣ ಸಾಮರ್ಥ್ಯ ಸುಮಾರು 45,000 ಎಂಬುದಾಗಿ ಲೆಕ್ಕ ಹಾಕಲಾಗಿದೆ.

ಇತರ ವನ್ಯಜೀವಿಗಳು ಮತ್ತು ದೇಶದ ಸಸ್ಯ ಸಂಪತ್ತನ್ನು ರಕ್ಷಿಸುವ ದೃಷ್ಟಿಯಿಂದ ಆನೆಗಳ ಸಂತತಿಯನ್ನು ನಿಯಂತ್ರಿಸುವುದಕ್ಕಾಗಿ ಹೆಚ್ಚುವರಿ ಆನೆಗಳನ್ನು ಸಾಮೂಹಿಕವಾಗಿ ಕೊಲ್ಲುವ ಬಗ್ಗೆ ದೇಶದ ಸರಕಾರವು ಇತ್ತೀಚಿನ ವಾರಗಳಲ್ಲಿ ಚಿಂತನೆ ನಡೆಸಿದೆ.

ಈ ಹಿಂದೆ ದೇಶದಲ್ಲಿ ಆನೆಗಳ ಸಾಮೂಹಿಕ ಹತ್ಯೆಯನ್ನು 1988ರಲ್ಲಿ ಮಾಡಲಾಗಿತ್ತು.
ಹೆಚ್ಚುತ್ತಿರುವ ಆನೆಗಳ ಸಂಖ್ಯೆಯು ಇತರ ಪ್ರಾಣಿಗಳ ವಾಸಸ್ಥಾನವನ್ನು ನಾಶಪಡಿಸುವ ಮೂಲಕ ಆ ಪ್ರಾಣಿಗಳ ಅಸ್ತಿತ್ವಕ್ಕೆ ಸಂಚಕಾರ ಒಡ್ಡಿದೆ ಹಾಗೂ ಹೆಚ್ಚೆಚ್ಚು ಪ್ರಮಾಣದಲ್ಲಿ ಮಾನವ-ಕಾಡುಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಾನವರು ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಡಝನ್ಗಟ್ಟಲೆ ಸಾವುಗಳು ಸಂಭವಿಸಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News