ಜೂ.15ರಂದು ಮುಖ್ಯಮಂತ್ರಿ, ಸಚಿವರು, ಶಾಸಕರ ಮನೆ, ಕಚೇರಿಗಳ ಮುಂದೆ ಪ್ರತಿಭಟನೆ: ಜನಾಗ್ರಹ ಆಂದೋಲನ

Update: 2021-06-07 11:16 GMT

ಬೆಂಗಳೂರು, ಜೂ.7: ಜನರ ಜೀವ ಮತ್ತು ಜೀವನ ಉಳಿಸಲು ಸರಕಾರ ಸಮಗ್ರ ಹಾಗೂ ಪರಿಣಾಮಕಾರಿ ಪ್ಯಾಕೇಜನ್ನು ಘೋಷಿಸಬೇಕೆಂದು ಒತ್ತಾಯಿಸಿ ಜನಾಗ್ರಹ ಆಂದೋಲನವು ಇಂದು ಮುಖ್ಯಮಂತ್ರಿಗಳಿಗೆ ಮೂರನೇ ಆಗ್ರಹ ಪತ್ರವನ್ನು ಸಲ್ಲಿಸಿದ್ದು, ಸರ್ವರ ಹಿತ ಕಾಯುವ ಸಮಗ್ರ ಪ್ಯಾಕೇಜ್ ಘೋಷಿಸಬೇಕು. ಕನಿಷ್ಠ 20 ಕೋಟಿ ರೂ. ಇದಕ್ಕೆ ಮೀಸಲಿಡಬೇಕು. ಕೋವಿಡ್‍ಅನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಬೇಕು ಎಂದು ಆಗ್ರಹಿಸಿದೆ.

ಸೋಮವಾರ ಮಧ್ಯಾಹ್ನ ಆನ್‌ಲೈನ್‌ ಮೂಲಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಜನಾಗ್ರಹ ಆಂದೋಲನವು, ಸರ್ಕಾರದ ಮುಂದೆ 5 ಅಂಶಗಳ ಆಗ್ರಹ ಪತ್ರವನ್ನು ಮಂಡಿಸಿ, ಮುಖ್ಯಮಂತ್ರಿ ಯಡಿಯೂರಪ್ಪವನವರಿಗೆ ಸಲ್ಲಿಸಿದೆ. ಜನಾಗ್ರಹ ಆಂದೋಲನವು ಮುಖ್ಯಮಂತ್ರಿಗೆ ಸಲ್ಲಿಸಿದ ಮೂರನೇ ಆಗ್ರಹ ಪತ್ರಕ್ಕೆ 650ಕ್ಕೂ ಹೆಚ್ಚು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹಿ ಮಾಡಿದ್ದಾರೆ.

ಲಾಕ್‍ಡೌನ್ ಮುಗಿದ ಮರುದಿನವೇ (ಜೂನ್ 15) ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಆಡಳಿತ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ಮನೆ ಮತ್ತು ಕಚೇರಿಗಳ ಮುಂದೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಜನಾಗ್ರಹ ಆಂದೋಲನ ತಿಳಿಸಿದೆ.

ಸರಕಾರ ಕೋವಿಡ್‍ ಎರಡನೇ ಅಲೆಯನ್ನು ಎದುರಿಸಲು ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ. ಅಲೆ ಶುರುವಾದ ಮೇಲೂ ತ್ವರಿತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹಾಗಾಗಿ ನಾಡಿನ ಜನತೆ ಅಪಾರ ಸಾವು ನೋವುಗಳನ್ನು ಅನುಭವಿಸಬೇಕಾಗಿ ಬಂದಿತು. ನಂತರದ ಲಾಕ್‍ಡೌನ್‍ ಜನರ ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸಿತು. ಜನಾಗ್ರಹವನ್ನೂ ಒಳಗೊಂಡಂತೆ ವಿವಿಧ ಜನಪರ ಸಂಘಟನೆಗಳು ಹಾಗೂ ಮಾಧ್ಯಮಗಳು ತೀವ್ರ ಒತ್ತಡ ಹಾಕಿದ ಮೇಲೆ ಸರಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿತು ಮತ್ತು ಎರಡು ಅರೆಬರೆ ಆರ್ಥಿಕ ನೆರವಿನ ಪ್ಯಾಕೇಜುಗಳನ್ನು ಘೋಷಿಸಿತು. ಇವನ್ನು ಜನಾಗ್ರಹ ಆಂದೋಲನವು ಸ್ವಾಗತಿಸುತ್ತದೆ. ಆದರೆ ಸಮಸ್ಯೆಯ ಅಗಾಧತೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ಕ್ರಮಗಳು ಯಾವ ರೀತಿಯಲ್ಲೂ ಸಾಲುವುದಿಲ್ಲ. 3.6 ಕೋಟಿ ಜನರಿರುವ ಕೇರಳಕ್ಕೆ ಅಲ್ಲಿನ ಸರಕಾರ 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದೆ. 6.8 ಕೋಟಿ ಜನರಿರುವ ಕರ್ನಾಟಕಕ್ಕೆ ತಮ್ಮ ಸರಕಾರ 2 ಸಾವಿರ ಕೋಟಿಯ ಪ್ಯಾಕೇಜ್ ಘೋಷಿಸಿದೆ. ಬಿಕ್ಕಟ್ಟಿನ ಆಳ ಮತ್ತು ಗಾಢತೆ ಸರಕಾರದ ಅರಿವಿಗಿನ್ನು ಬಂದಿಲ್ಲ ಎಂದು ಜನಾಗ್ರಹ ಆಂದೋಲನ ಟೀಕಿಸಿದೆ.

ರಾಜ್ಯದ ಜನತೆ ಎದುರಿಸುತ್ತಿರುವ ವಿಷಮ ಪರಿಸ್ಥಿತಿಯಿಂದ ಅವರನ್ನು ಕಾಪಾಡಬೇಕಾದರೆ ಮತ್ತು ಮೂರನೇ ಅಲೆಗೆ ಸನ್ನದ್ಧವಾಗಬೇಕಾದರೆ ಸರಕಾರ ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ. ಸಾರ್ವತ್ರಿಕವಾದ, ಸಮಗ್ರವಾದ, ವಿಶೇಷವಾಗಿ ಜನಸಾಮಾನ್ಯರೆಲ್ಲರ ಸಂಕಷ್ಟವನ್ನು ಕೊಂಚವಾದರೂ ತಗ್ಗಿಸಬಲ್ಲ ಪರಿಣಾಮಕಾರಿ ಮೂರನೇ ಪ್ಯಾಕೇಜಿನ ಅಗತ್ಯವಿದೆ. ಹಾಗೆಂದು ಅಸಾಧ್ಯವಾದ ಬೇಡಿಕೆಗಳನ್ನು ನಾವು ನಿಮ್ಮ ಮುಂದೆ ಇಡುತ್ತಿಲ್ಲ. ಕಷ್ಟಸಾಧ್ಯ ಹೌದಾದರೂ ಕಾರ್ಯಸಾಧುವಾದ ಕ್ರಮಗಳನ್ನು ಹಾಗೂ ಅದಕ್ಕೆತಗಲಬಹುದಾದ ವೆಚ್ಚ ಮತ್ತು ಆದಾಯದ ಮೂಲದ ಜೊತೆ ಈ ವಿಚಾರವನ್ನು ಮೂರನೇ ಬಾ ರಿತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದೆ.

ಸರಕಾರ ತೆಗೆದುಕೊಳ್ಳಲೇಬೇಕಿರುವ ತುರ್ತು ಕ್ರಮಗಳು
1. ವೈದ್ಯಕೀಯ ಸೌಲಭ್ಯಗಳನ್ನು ಬಲಪಡಿಬೇಕು,ಗ್ರಾಮೀಣ ಭಾಗದಲ್ಲಿ ಕೋವಿಡ್ ಕೇಂದ್ರಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್‍ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತಗೊಳಿಸಬೇಕು.
2. ಎಲ್ಲಾ ವಯಸ್ಸಿನವರಿಗೂ ಕೂಡಲೇ ಉಚಿತ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು. ಯಾವುದೇ ಗೊಂದಲ, ಅಸ್ಪಷ್ಟತೆ ಮತ್ತು ಭೇದಭಾವಕ್ಕೆ ಅವಕಾಶ ಕೊಡದೆ, ಎಷ್ಟು ದಿನದೊಳಗೆ ಹಾಗೂ ಯಾವ ರೀತಿಯ ಪ್ರಕ್ರಿಯೆ ಅಳವಡಿಸಿ ಇದನ್ನು ಪೂರ್ಣಗೊಳಿಸಲಾಗುವುದು ಎಂಬುದನ್ನು ಸರಕಾ ರಜನತೆಗೆ ಸ್ಪಷ್ಟವಾಗಿ ತಿಳಿಸಬೇಕು.
3. ಎಲ್ಲಾ ಬಡ ಕುಟುಂಬಗಳಿಗೂ ಸಮಗ್ರ ಪಡಿತರ ಒದಗಿಸಬೇಕು ಮತ್ತು ಲಾಕ್‍ಡೌನ್‍ ಕಾಲಾವಧಿಗೆ ಮಾಸಿಕ 5000 ದಂತೆ ಎರಡು ತಿಂಗಳಿಗೆ 10,000 ರೂ. ನೆರವುಧನ ನೀಡಬೇಕು.
4. ಅನಾಥಗೊಂಡ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು 5 ಲಕ್ಷ ರೂ. ಪರಿಹಾರ ಧನ ನೀಡಬೇಕು.
5. ರೈತರ ಮುಂಗಾರು ಬಿತ್ತನೆಯ ಗೊಬ್ಬರ ಮತ್ತು ಬೀಜಕ್ಕೆ ವಿಶೇಷ ಸಬ್ಸಿಡಿ ಘೋಷಿಸಬೇಕು ಎಂದು ಒತ್ತಾಯಿಸಿದೆ.

70 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಸಮಗ್ರ ದಿನಸಿ ಕಿಟ್‍ ಒದಗಿಸಲು- 700 ಕೋಟಿ ರೂ.,70 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 5000ದಂತೆ ಎರಡು ತಿಂಗಳಿಗೆ 10,000 - ಒಟ್ಟು 7000 ಕೋಟಿ, ಅನಾಥಗೊಂಡಿರುವ ಕುಟುಂಬಗಳಿಗೆ 5 ಲಕ್ಷದಂತೆ ಪರಿಹಾರ ನೀಡಲು ಹೆಚ್ಚೆಂದರೆ 750 ಕೋಟಿ ರೂ., ರೈತರಿಗೆ ಬೀಜ–ಗೊಬ್ಬರದ ವಿಶೇಷ ಸಬ್ಸಿಡಿ ನೀಡಲು 5000 ಕೋಟಿ ರೂ., ಕೋವಿಡ್‍ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲು ಮತ್ತು ಗ್ರಾಮೀಣ ಭಾಗದ ಕೋವಿಡ್ ವ್ಯವಸ್ಥೆಯನ್ನು ಬಲಪಡಿಸಲು 5000 ಕೋಟಿ ರೂ., ವ್ಯಾಕ್ಸಿನ್ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರವೇ ಭರಿಸಬೇಕು. ಜನರ ತುರ್ತು ಆರ್ಥಿಕ ಸಂಕಟಕ್ಕೆ ನೆರವಾಗಲು ಹಾಗೂ ಕೋವಿಡ್ ಮೂರನೇ ಅಲೆಗೆ ಸಿದ್ಧವಾಗಲು ಸರಕಾರ ವ್ಯಯಿಸಬೇಕಿರುವ ವೆಚ್ಚ 20 ಸಾವಿರ ಕೋಟಿ. ಈ ಹಣವನ್ನು ಸಂಗ್ರಹಿಸುವುದು ಅಸಾಧ್ಯವಾದ ವಿಚಾರವಲ್ಲ. ಸರಕಾರಕ್ಕೆ ಇಚ್ಛಾಶಕ್ತಿ ಇರಬೇಕು ಅಷ್ಟೆ ಎಂದು ತಿಳಿಸಿದೆ.

ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಿರುವ 30 ಸಾವಿರ ಕೋಟಿಯಲ್ಲಿ 15 ಕೋಟಿಯಷ್ಟನ್ನಾದರೂ ಒತ್ತಾಯಿಸಿ ಪಡೆದುಕೊಳ್ಳಬೇಕು. ಕೇಂದ್ರ ಸರಕಾರ ಕೋವಿಡ್‍ಅನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ, ಕನಿಷ್ಠ 10 ಸಾವಿರ ಕೋಟಿಯನ್ನು ರಾಜ್ಯಗಳಿಗೆ ನೀಡಬೇಕೆಂದು ಆಗ್ರಹಿಸಬೇಕು. ರಾಜ್ಯ ಸರಕಾರ ತುರ್ತಲ್ಲದ ಬೆಂಗಳೂರು ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿ ಜನಹಿತ ಪ್ಯಾಕೇಜಿಗೆ 10 ಸಾವಿರ ಕೋಟಿ ತೆಗೆದಿಡಬೇಕು. ಕೋಟ್ಯಾಧೀಶರ ಮೇಲೆ ಶೇ. 2 ಸಂಪತ್ತು ತೆರಿಗೆ ವಿಧಿಸಿ, ಐಶರಾಮಿ ಸೇವೆಗಳ ಮೇಲೆ ಶೇ.2 ಸುಂಕ ಹೆಚ್ಚಿಸಿ ಕನಿಷ್ಠ 10 ಕೋಟಿ ಸಂಗ್ರಹಿಸಬಹುದು ಹಾಗೂ ಅನಿವಾರ್ಯವಾದರೆ ದೂರಗಾಮಿಯಾದ ಬಡ್ಡಿ ರಹಿತ ಸಾಲವಾಗಿ 10 ಸಾವಿರ ಕೋಟಿ ಪಡೆಯಬಹುದು. ಅಗತ್ಯವಿರುವುದು 20 ಸಾವಿರ ಕೋಟಿ, ಸರಕಾರದ ಮುಂದೆ 50 ಸಾವಿರ ಕೋಟಿಯ ಸಾಧ್ಯತೆಗಳಿವೆ. ಅವನ್ನು ಬಳಸುವ ಇಚ್ಛಾಶಕ್ತಿಯನ್ನು ಇಂದು ರಾಜ್ಯ ಸರಕಾರ ತೋರಬೇಕಿದೆ. ಸರಕಾರ ಇದನ್ನು ಮಾಡದಿದ್ದರೆ ಜನಸಾಮಾನ್ಯರ ಬವಣೆ ತಪ್ಪುವುದಿಲ್ಲ, ನಮ್ಮ ಆರ್ಥಿಕತೆ ಚೇತರಿಸಿಕೊಳ್ಳುವುದಿಲ್ಲ. ಅಕ್ಟೋಬರ್ ಹೊತ್ತಿಗೆ ಬರಲಿರುವ ಮೂರನೇ ಅಲೆಗೆ ರಾಜ್ಯ ಸಿದ್ಧಗೊಳ್ಳಲೂ ಸಾಧ್ಯವಿಲ್ಲ ಎಂದು ಜನಾಗ್ರಹ ಆಂದೋಲನ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ, ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ಕೆ.ಎಲ್‌. ಅಶೋಕ್‌, ಉಮರ್‌ ಯು.ಹೆಚ್.‌ಮಹಮದ್ ಯೂಸುಫ್‌ ಕನ್ನಿ, ಸ್ವರಾಜ್‌ ಇಂಡಿಯಾದ ಚಾಮರಸ ಮಾಲಿ ಪಾಟೀಲ್‌, ಕರ್ನಾಟಕ ಜನಶಕ್ತಿ ಸಂಘಟನೆಯ ಅಧ್ಯಕ್ಷ ನೂರ್‌ ಶ್ರೀಧರ್‌, ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ಮಾವಳ್ಳಿ ಶ್ರೀಧರ್, ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಕಾರ್ಯದರ್ಶಿ ಇಂಧುದರ ಹೊನ್ನಾಪುರ, ಎಸ್‌ಡಿಪಿಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News