ಲಾಕ್‍ಡೌನ್ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯೇಂದ್ರ: ವರದಿ ಸಲ್ಲಿಸುವಂತೆ ಮೈಸೂರು ಡಿಸಿಗೆ ಹೈಕೋರ್ಟ್ ಆದೇಶ

Update: 2021-06-10 12:32 GMT

ಬೆಂಗಳೂರು, ಜೂ.10: ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಕೋವಿಡ್ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರು ಡಿಸಿಗೆ ಆದೇಶ ನೀಡಿದೆ.

ಈ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ವಿಜಯೇಂದ್ರ ಕುಟುಂಬ ಸಮೇತರಾಗಿ ಮೇ 18ರಂದು ಮೈಸೂರಿನ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ, ಹೋಮ ಹವನ ನಡೆಸಿದ್ದರು.

ಮುಖ್ಯಮಂತ್ರಿಯ ಮಗನಾಗಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಅಲ್ಲದೆ, ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ-1987ರ ಪ್ರಕಾರ ಆರೋಪಿತರ ನಡೆ ಅಪರಾಧದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿತ್ತು. ಗುರುವಾರ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಡಿಸಿಗೆ ಆದೇಶ ನೀಡಿದೆ.

ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ ಬಿ.ವೈ.ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಸರಕಾರದ ನಿಯಮಗಳು ಜನ ಸಾಮಾನ್ಯರಿಗೆ ಅನ್ವಯಿಸುವಂತೆಯೇ ಸಿಎಂ ಪುತ್ರನಿಗೂ ಅನ್ವಯಿಸುತ್ತವೆ. ಹೀಗಾಗಿ ವಿಜಯೇಂದ್ರ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡುವಂತೆ ಹಾಗೂ ದೇವಾಲಯದ ಆಡಳಿತ ಸಿಬ್ಬಂದಿ, ಪುರೋಹಿತರನ್ನು ಅಮಾನತು ಮಾಡುವಂತೆ ಲಿಖಿತವಾಗಿ ಒತ್ತಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News