ಹಿಡ್ಮೆ ಮರ್ಕಮ್ ಬಂಧನ: ಆರೋಪಗಳ ಕುರಿತು ಕೇಂದ್ರಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ವರದಿಗಾರರ ಪತ್ರ

Update: 2021-06-10 17:12 GMT

ಹೊಸದಿಲ್ಲಿ,ಜೂ.10: ಛತ್ತೀಸ್ಗಡದ ಆದಿವಾಸಿ ಹಕ್ಕುಗಳ ಕಾರ್ಯಕರ್ತೆ ಹಿಡ್ಮೆ ಮರ್ಕಮ್ ಅವರ ಬಂಧನ ಮತ್ತು ಅವರ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಸ್ಪಷ್ಟನೆಯನ್ನು ಕೇಳಿ ವಿಶ್ವಸಂಸ್ಥೆಯ ಏಳು ಮಾನವ ಹಕ್ಕುಗಳ ವಿಶೇಷ ವರದಿಗಾರರು ಕೇಂದ್ರ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಎ.8ರಂದು ಬರೆಯಲಾಗಿದ್ದ ಈ ಪತ್ರಕ್ಕೆ ಉತ್ತರಿಸಲು ಎರಡು ತಿಂಗಳ ಗಡುವನ್ನು ನೀಡಲಾಗಿದ್ದು,ಅದು ಜೂನ್ 8ಕ್ಕೆ ಮುಗಿದಿದೆ.

ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಮಾನವ ಹಕ್ಕುಗಳ ಹೋರಾಟಗಾರರ ಕಾರ್ಯವನ್ನು ಉತ್ತೇಜಿಸುವ ಮತ್ತು ಅವರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ.
ನಕ್ಸಲ್ ಪೀಡಿತ ದಾಂತೆವಾಡಾ ಪ್ರದೇಶದಲ್ಲಿ ಕ್ರಿಯಾಶೀಲರಾಗಿರುವ ಮರ್ಕಮ್ ಆದಿವಾಸಿಗಳ ಮೇಲಿನ ಪೊಲೀಸ್ ಮತ್ತು ನಕ್ಸಲರ ದೌರ್ಜನ್ಯಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಜೈಲ್ ಬಂದಿ ರಿಹಾಯಿ ಮಂಚ್ನ ಪ್ರಮುಖ ಕಾರ್ಯಕರ್ತೆಯಾಗಿರುವ ಅವರು ಕಳೆದ ಕೆಲವು ವರ್ಷಗಳಲ್ಲಿ ಇತರ ಆದಿವಾಸಿ ಹಕ್ಕುಗಳ ಕಾರ್ಯಕರ್ತರೊಂದಿಗೆ ಬಸ್ತಾರ್ ಪ್ರದೇಶದಲ್ಲಿ ಕೆಲವು ನಿರ್ಣಾಯಕ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು. ಮಾರ್ಚ್ 9ರಂದು ಅವರನ್ನು ಪೊಲೀಸರು ಬಂಧಿಸಿದ್ದರು.
   
ವಿಶ್ವ ಮಹಿಳಾ ದಿನದ ಅಂಗವಾಗಿ ಪೊಲೀಸ್ ಕಸ್ಟಡಿಯಲ್ಲಿ ಲೈಂಗಿಕ ದೌರ್ಜನ್ಯದ ಬಳಿಕ ಸಾವನ್ನಪ್ಪಿದ್ದ ಇಬ್ಬರು ಆದಿವಾಸಿ ಯುವತಿಯರ ಸ್ಮಾರಕ ಸ್ಥಳದಲ್ಲಿ ಮಾ.8ರಂದು ಮಂಚ್ನ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ ಪೊಲೀಸರು ಆದಿವಾಸಿ ಮಹಿಳೆಯರು ಕಾರ್ಯಕ್ರಮಕ್ಕೆ ತೆರಳುವುದನ್ನು ತಡೆದಿದ್ದು ಅದಕ್ಕಾಗಿ ತನಿಖಾ ಠಾಣೆಗಳನ್ನೂ ಸ್ಥಾಪಿಸಿದ್ದರು. ಮಹಿಳೆಯರು ಮುಂದಕ್ಕೆ ತೆರಳುವಂತಾಗಲು ಮರ್ಕಮ್ ಈ ತನಿಖಾ ಠಾಣೆಗಳಿಗೆ ಖುದ್ದಾಗಿ ಭೇಟಿ ನೀಡಿದ್ದರು. ಮಾ.8ರಂದು ಸ್ಮಾರಕ ಸ್ಥಳದಿಂದ ಮೂವರನ್ನು ಪೊಲೀಸರು ಬಂಧಿಸಿದ್ದರು. 

ಮಾ.9ರಂದು ಯಾವುದೇ ವಾರಂಟ್ ಇಲ್ಲದೆ ಮರ್ಕಮ್ ಅವರನ್ನು ಅವರ ಸಮೆಲಿ ಗ್ರಾಮದ ಮನೆಯಿಂದ ಬಂಧಿಸಲಾಗಿತ್ತು. ಮೂರು ಗಂಟೆಗಳವರೆಗೆ ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳನ್ನು ಪೊಲೀಸರು ನೀಡಿರಲಿಲ್ಲ ಎಂದು ಈ ವರದಿಗಾರರು ಪತ್ರದಲ್ಲಿ ಬರೆದಿದ್ದಾರೆ.

ಮರ್ಕಮ್ ವಿರುದ್ಧ ಕರಾಳ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಆರೋಪವನ್ನು ಹೊರಿಸಿರುವುದನ್ನು ಬೆಟ್ಟು ಮಾಡಿರುವ ಪತ್ರದಲ್ಲಿ ಮರ್ಕಮ್ ಅವರ ಕಾನೂನುಬದ್ಧ ಮಾನವ ಹಕ್ಕುಗಳ ಕಾರ್ಯಗಳಿಗೆ,ವಿಶೇಷವಾಗಿ ಅವರು ರಾಜ್ಯದ ಭದ್ರತಾ ಪಡೆಗಳಿಂದ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದ ಘಟನೆಗಳನ್ನು ಪ್ರಮುಖವಾಗಿ ಬಿಂಬಿಸಿದ್ದಕ್ಕೆ ಉತ್ತರವಾಗಿ ಅವರನ್ನು ಬಂಧಿಸಿರುವಂತೆ ಕಂಡುಬರುತ್ತಿದೆ ಎಂದು ಹೇಳಲಾಗಿದೆ.

ಮರ್ಕಮ್ ಬಂಧನಕ್ಕೆ ಕಾರಣಗಳು,ಪ್ರಕರಣದ ಸ್ಥಿತಿಗತಿ,ವಕೀಲರ ಭೇಟಿಗೆ ಮತ್ತು ಕುಟುಂಬವನ್ನು ಸಂಪರ್ಕಿಸಲು ಅವರಿಗೆ ಅವಕಾಶ ನೀಡಲಾಗಿದೆಯೇ,ಭಯೋತ್ಪಾದಕ ಸಂಘಟನೆಯ ಸದಸ್ಯೆ ಎಂಬ ಆರೋಪವನ್ನು ಅವರ ವಿರುದ್ಧ ಹೊರಿಸಿದ್ದೇಕೆ ಇತ್ಯಾದಿಗಳ ಬಗ್ಗೆ ಎರಡು ತಿಂಗಳುಗಳಲ್ಲಿ ವಿಶ್ವಸಂಸ್ಥೆಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಇದೀಗ ಈ ಗಡುವು ಮುಗಿದು ಎರಡು ದಿನಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News