ಹಣಕಾಸು ಸ್ಥಿತಿ ಹದಗೆಟ್ಟಿದ್ದರೂ ಬಡವರ ಅನುಕೂಲಕ್ಕಾಗಿ ಪ್ಯಾಕೇಜ್ ಘೋಷಣೆ: ಸಿಎಂ ಯಡಿಯೂರಪ್ಪ

Update: 2021-06-11 07:27 GMT

ಹಾಸನ, ಜೂ.11: ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ. ಆದರೂ ಬಡವರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಲ್ಲಿ ಅವರ ಅನುಕೂಲಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ

ಬೂವನಹಳ್ಳಿ ವಿಮಾನ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಮುಖ್ಯಮಂತ್ರಿ ಗೌರವ ವಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಪೇಕ್ಷೆಯಂತೆ ಹಾಸನ ಬೂವನಹಳ್ಳಿ ಬಳಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಪರಿಸ್ಥಿತಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್‌ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರಕಾರವೇ ಕಾರಣ ಎಂಬ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು. ಅವರು ಕೂಡ ಶಾಸಕರಾಗಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು. ಅವರ ಕೆಲಸ ಸಮರ್ಪಕವಾಗಿ ನಿರ್ವಹಿಸದೆ ಬೇರೆಯವರ ಬಗ್ಗೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಮೂರನೇ ಅಲೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ, ಈ ಬಗ್ಗೆ ಯಾವುದೇ ಅನಾಹುತ ಆಗದಂತೆ ಈಗಾಗಲೇ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಕೋವಿಡ್ ಬಗ್ಗೆ ಸರಕಾರ ಸುಳ್ಳು ಲೆಕ್ಕ ಕೊಡುತ್ತಿದೆ ಎಂಬ ವಿಪಕ್ಷಗಳ ಆರೋಪದ ಮಾಧ್ಯಮದವರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಸಿಎಂ, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು..? ಇಂತಹ ಸುಳ್ಳು ಲೆಕ್ಕ ಕೊಡುವುದರಿಂದ ನಮಗೇನು ಲಾಭವಿದೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News