ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2021-06-11 09:03 GMT

ಮೈಸೂರು, ಜೂ.11: ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಜಿಲ್ಲಾ ಗ್ರಾಮಾಂತರ ಮತ್ತು ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ದಾಸಪ್ಪ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಪೆಟ್ರೋಲ್ ಬಂಕ್ ಮುಂಭಾಗ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಬಡವರು, ಸಾಮಾನ್ಯ ವರ್ಗದ ಜನರ ತಲೆಯ ಮೇಲೆ ಭಾರ ಹೊರಿಸಿದೆ ಎಂದು ಕಿಡಿಕಾರಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲ ಬೆಲೆ ಕಡಿಮೆಯಿದ್ದರೂ ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದಾರೆ ಎಂದು ಹರಿಹಾಯ್ದರು.

ಈ ಹಿಂದೆ ಕಾಂಗ್ರಸ್ ಪಕ್ಷದ ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ 110 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 60 ರೂ. ಇತ್ತು. ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ 40 ಡಾಲರ್ ಗೆ ಇಳಿದಿದೆ. ಆದರೆ ಪೆಟ್ರೋಲ್ ಬೆಲೆ 100 ರೂ ಗಳಿಗೆ ಏರಿಸಲಾಗಿದೆ ಎಂದು ಕಿಡಿಕಾರಿದರು.

ನಮ್ಮ ಪಕ್ಕದ ದೇಶಗಳಾದ ಶ್ರೀಲಂಕಾ ಮತ್ತು ಪಾಕೀಸ್ತಾನಗಳಲ್ಲಿ ಪೆಟ್ರೋಲ್ ದರ ಕಡಿಮೆ ಇದೆ. ಆದರೆ ನಮ್ಮ ದೇಶದಲ್ಲೇ ಏರಿಕೆ ಮಾಡಿರುವುದು.‌ ಜೊತೆಗೆ ಗ್ಯಾಸ್ ಬೆಲೆಯನ್ನು ದುಪ್ಪಟ್ಟು ಏರಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರುಗಳಾದ ಎಚ್.ಎ.ವೆಂಕಟೇಶ್, ಹೆಡತಲೆ ಮಂಜುನಾಥ್, ಎನ್.ಭಾಸ್ಕರ್ ಶಿವಪ್ರಸಾದ್, ಮಹೇಶ್, ಡೊನಾಲ್ಡ್, ರಫೀಕ್ ಅಹಮದ್, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News