ಹಿರಿಯ ಪತ್ರಕರ್ತ, ಚಿತ್ರ ನಟ ಸುರೇಶ್​ ಚಂದ್ರ ಕೊರೋನ ಸೋಂಕಿನಿಂದ ನಿಧನ

Update: 2021-06-11 10:12 GMT

ಬೆಂಗಳೂರು, ಜೂ.11: ಹಿರಿಯ ಪತ್ರಕರ್ತ ಹಾಗೂ ಚಿತ್ರನಟ ಸುರೇಶ್​ ಚಂದ್ರ ಅವರು ಇಂದು ಕೊರೋನ ಸೋಂಕಿನಿಂದ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಕೊರೋನ ಸೋಂಕಿನಿಂದ ಬಳಲುತ್ತಿದ್ದ ಸುರೇಶ್​ ಚಂದ್ರ ಅವರನ್ನು ಇತ್ತೀಚಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.

ಸುರೇಶ್​ಚಂದ್ರ ಅವರು ಶಂಕರ್​ನಾಗ್​, ವಿಷ್ಣುವರ್ಧನ್​, ಅಂಬರೀಶ್​, ದೇವರಾಜ್​ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಸಂಜೆವಾಣಿ ಪತ್ರಿಕೆಯಲ್ಲಿ ಸುದೀರ್ಘವಾಗಿ ಕೆಲಸ ನಿರ್ವಹಿಸಿದ್ದ ಅವರು ಕಳೆದ ವರ್ಷ ನಿವೃತ್ತಿಯಾಗಿದ್ದರು. ಮೃತರು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ.

ಮುಖ್ಯಮಂತ್ರಿ ಸಂತಾಪ
ಹಿರಿಯ ಪತ್ರಕರ್ತ, ಕಲಾವಿದ ಸುರೇಶ್ ಚಂದ್ರ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News