11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಪ್ರಕಟ

Update: 2021-06-11 14:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ, 11: `ದಕ್ಷಿಣ ಕನ್ನಡ, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕೋವಿಡ್-19 ಸೋಂಕಿನ ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿಸಿದ್ದು, ಉಳಿದ ಜಿಲ್ಲೆಗಳಲ್ಲಿ ಜೂ.14ರಿಂದ 21ರ ವರೆಗೆ ಕೋವಿಡ್ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಸೇರಿದಂತೆ 11 ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಜೂ.21ರವರೆಗೆ ಯಾವುದೇ ಬದಲಾವಣೆ ಇಲ್ಲ. ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದ್ದು, ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಚರ್ಚಿಸಿ, ಸೋಂಕು ತಡೆಗಟ್ಟಲು ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಈಗಾಗಲೇ ಸರಕಾರ ಹೊರಡಿಸಿರುವ ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಗಳೊಂದಿಗೆ ಜೂ.14ರ ಬೆಳಗ್ಗೆ 6 ಗಂಟೆಯಿಂದ ಜೂ.21ರ ಬೆಳಗ್ಗೆ 6 ಗಂಟೆಯವರೆಗೆ ಹೊಸ ನಿಯಮಗಳು ಜಾರಿಯಲ್ಲಿರುತ್ತದೆ.

11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅನ್ವಯವಾಗುವ ನಿಯಮಗಳು

► ದಿನಸಿ, ಮೀನು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವಿದೆ.

► ಮಧ್ಯಾಹ್ನ 2 ಗಂಟೆಯವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.

► ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ಮಾಡಕೊಡಲಾಗಿದೆ. ಸಿಮೆಂಟ್, ಸ್ಟೀಲ್ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. 

► ಗಾರ್ಮೆಂಟ್ಸ್ ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ.

► ಬಾರ್, ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ. ಮದ್ಯ ಮಳಿಗೆಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶವಿದೆ.

► ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಸಂಚರಿಸಬಹುದು

► ಕೆಎಸ್ಆರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಸಂಚಾರ, ಮೆಟ್ರೋ ರೈಲು ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. 

► ನಿಗದಿಯಾದ ಮದುವೆಗಳಲ್ಲಿ 40 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ

► ಅಂತ್ಯಕ್ರಿಯೆಯಲ್ಲಿ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ರಾತ್ರಿ ಕರ್ಫ್ಯೂ: ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಯಾರಿಗೂ ಸಂಚಾರಕ್ಕೆ ಅವಕಾಶವಿಲ್ಲ. ಈ ಅವಧಿಯಲ್ಲಿ ಕಾರ್ಖಾನೆಗಳು ಕೆಲಸ ನಿರ್ವಹಿಸಬಹುದು. ಕೆಲಸಗಾರರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು.

ವೀಕೆಂಡ್ ಕರ್ಫ್ಯೂ: ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅಗತ್ಯ ಸೇವೆ, ಹಾಲು, ತರಕಾರಿ, ಬೀದಿ ಬದಿ ವ್ಯಾಪಾರಸ್ಥರರು, ಮದ್ಯದಂಗಡಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News