ನಟ ದರ್ಶನ್ ಮನವಿಗೆ ಉತ್ತಮ ಸ್ಪಂದನೆ: ತ್ಯಾವರೆಕೊಪ್ಪ 'ಹುಲಿ ಮತ್ತು ಸಿಂಹಧಾಮ'ಕ್ಕೆ 2.53 ಲಕ್ಷ ರೂ. ದೇಣಿಗೆ

Update: 2021-06-11 11:23 GMT

ಶಿವಮೊಗ್ಗ, ಜೂ.11: ಕೊರೋನ ಸಂಕಷ್ಟದ ಸಮಯದಲ್ಲಿ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದ್ದ ನಟ ದರ್ಶನ್ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ತ್ಯಾವರೆಕೊಪ್ಪ ಹುಲಿ ಹಾಗೂ ಸಿಂಹಧಾಮಕ್ಕೆ ಪ್ರಾಣಿ ಪ್ರಿಯರು ನೆರವಿನ ಹಸ್ತ ಚಾಚಿದ್ದಾರೆ. ಮೂರೇ ದಿನದಲ್ಲಿ ಹುಲಿ ಮತ್ತು ಸಿಂಹಧಾಮಕ್ಕೆ 56 ಮಂದಿ 2.53 ಲಕ್ಷ ರೂ ದೇಣಿಗೆ ನೀಡಿದ್ದಾರೆ.

ಎಪ್ರಿಲ್‌ನಿಂದ ಇದುವರೆಗೆ ದೇಣಿಗೆ ಹಾಗೂ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ 4.58 ಲಕ್ಷ ರೂ. ಸಂಗ್ರಹವಾಗಿದೆ. ಎಪ್ರಿಲ್ ತಿಂಗಳಲ್ಲಿ ಒಬ್ಬರು 5 ಸಾವಿರ ದೇಣಿಗೆ ನೀಡಿದ್ದಾರೆ. ಮೇ ತಿಂಗಳಲ್ಲಿ 20 ಮಂದಿ 2.35 ಲಕ್ಷ ರೂ. ನೆರವು ನೀಡಿದ್ದರು. ಈ ತಿಂಗಳಿನ ಮೂರು ದಿನಗಳಲ್ಲಿ 38 ಮಂದಿ ವಿವಿಧ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ ಹಾಗೂ 18 ಮಂದಿ ದೇಣಿಗೆ ನೀಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಸಿಂಹಧಾಮದ ದತ್ತು ಯೋಜನೆಯಲ್ಲಿ ಕಳೆದ ವರ್ಷ 32 ದಾನಿಗಳು ಸರಿಸುಮಾರು 9 ಲಕ್ಷ ರೂ. ಮೊತ್ತದ ದತ್ತು ಸ್ವೀಕಾರ ಮಾಡಿದ್ದರು. ಇದರಲ್ಲಿ ಒಬ್ಬರೇ 7 ಲಕ್ಷ ರೂ. ನೀಡಿದ್ದರು. ಇದಕ್ಕೆ ಹೋಲಿಸಿದರೆ ಈ ವರ್ಷ ಮೂರು ತಿಂಗಳ ಅವಧಿಯಲ್ಲಿ ಜನರಿಂದ ಬಹಳ ಪ್ರಾಣಿ ಪ್ರೀತಿ ವ್ಯಕ್ತವಾಗಿದೆ. ಪ್ರತಿ ತಿಂಗಳು ಲಕ್ಷಾಂತರ ರೂ. ನಿರ್ವಹಣೆ ವೆಚ್ಚ ಭರಿಸುವ ತ್ಯಾವರೆಕೊಪ್ಪ ಸಫಾರಿ ಹಾಗೂ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ, ಸಿಂಹ, ಚಿರತೆ, ಕರಡಿ, ಹೈನಾ, ನರಿ, ಬಾತುಕೋಳಿ, ಮೊಸಳೆ, ಹೆಬ್ಬಾವು, ಮಲಬಾರ್, ಅಳಿಲು, ಎಮು, ವಿವಿಧ ಪಕ್ಷಿಗಳು, ಅಸ್ಟ್ರೀಚ್, ಜಿಂಕೆ, ಸಾಂಬಾರ, ಕೃಷ್ಣಮೃಗ ಹೀಗೆ ಎಲ್ಲ ಸೇರಿ 400ಕ್ಕೂ ಹೆಚ್ಚು ಪ್ರಾಣಿಗಳಿವೆ.

ದರ್ಶನ್ ಅಭಿಮಾನಿ ನೆರವು: ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ್ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಹುಲಿ ದತ್ತು ಪಡೆದ ದಂಪತಿ: ತುಮಕೂರು ಜಿಲ್ಲೆಯ ಗುಬ್ಬಿಯ ನಿವೃತ್ತ ರೈಲ್ವೆ ಅಧಿಕಾರಿ ಆದಿಶೇಷ ಹಾಗೂ ಶೈಲಜಾ ದಂಪತಿ ಬುಧವಾರ ಒಂದು ಹುಲಿಯನ್ನು ಒಂದು ವರ್ಷದ ಮಟ್ಟಿಗೆ ದತ್ತು ಸ್ವೀಕಾರ ಮಾಡಿದ್ದಾರೆ. ಇದಕ್ಕಾಗಿ 1 ಲಕ್ಷ ರೂ. ನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿದ್ದಾರೆ.

ಕಳೆದ ವರ್ಷ ಆದಿಶೇಷ ಹಾಗೂ ಶೈಲಜಾ ದಂಪತಿ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಆಗಮಿಸಿ ಪ್ರಾಣಿಗಳನ್ನು ವೀಕ್ಷಣೆ ಮಾಡಿದ್ದರು. ಜೂ.8ರಂದು ತ್ಯಾವರೆಕೊಪ್ಪ ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಫೋನ್ ಮಾಡಿ, ತಾವು ಪ್ರಾಣಿಯೊಂದನ್ನು ದತ್ತು ಸ್ವೀಕರಿಸಲು ತೀರ್ಮಾನಿಸಿರುವುದಾಗಿ ಶೈಲಜಾ ತಿಳಿಸಿದ್ದರು. ಅದರ ಪ್ರಕಾರ ದತ್ತು ಸ್ವೀಕಾರ ಮಾಡಿದ್ದಾರೆ.

ಪ್ರಾಣಿಗಳ ನೆರವಿಗೆ ಹಲವು ಅವಕಾಶ: ತ್ಯಾವರೆಕೊಪ್ಪ ಸಿಂಹಧಾಮವನ್ನು ಕೋಟ್ಯಂತರ ರೂ ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. ಹೊಸ ಹೊಸ ಪ್ರಾಣಿಗಳನ್ನು ತರಲು ಸಿದ್ದತೆ ನಡೆಸಲಾಗಿದೆ. ಜೊತೆಗೆ ಹೊಸ ಆವರಣಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ಕೆ ದಾನಿಗಳು ನೆರವು ನೀಡಬಹುದು ಎಂದು ಹುಲಿ ಮತ್ತು ಸಿಂಹಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಆವರಣಕ್ಕೆ ಅಗತ್ಯವಿರುವ ಅನುದಾನವನ್ನು ನೇರವಾಗಿ ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೀಡಬಹುದು. ಇಲ್ಲವೇ ತಾವೇ ಆವರಣವನ್ನು ನಿರ್ಮಿಸಿಕೊಡಬಹುದಾಗಿದೆ. ಪ್ರಾಣಿಗಳಿಗೆ ಮಾಂಸವನ್ನು ಹೊರತುಪಡಿಸಿ ಸೋಲಾರ್ ದೀಪದ ವ್ಯವಸ್ಥೆ, ಕುಡಿಯುವ ನೀರಿನ ಘಟಕಗಳು, ಸಿಂಹಧಾಮದ ಕಚೇರಿಗೆ ಪಿಠೋಪಕರಣ ಮುಂತಾದವುಗಳನ್ನು ದಾನಿಗಳು ನೀಡಬಹುದಾಗಿದೆ.

ಆನ್‌ಲೈನ್‌ನಲ್ಲೇ ಪ್ರಮಾಣ ಪತ್ರ: ಈ ತನಕ ಸಿಂಹಧಾಮದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದವರಿಗೆ 80(ಜಿ) ಮೂಲಕ ತೆರಿಗೆ ವಿನಾಯಿತಿ ಸಿಗುತ್ತಿತ್ತು. ಕನಿಷ್ಠ ಮತ್ತು ಗರಿಷ್ಠ ದೇಣಿಗೆ ಎಂದು ಯಾವುದೇ ನಿರ್ಬಂಧ ವಿಧಿಸಿಲ್ಲ. ಪ್ರಾಣಿ ಪ್ರಿಯರು ಆನ್‌ಲೈನ್ ಮೂಲಕವೇ ಎಷ್ಟು ಬೇಕಾದರೂ ದೇಣಿಗೆ ಪಾವತಿಸಬಹುದು. ಹೀಗೆ ಪಾವತಿಯಾಗುವ ದೇಣಿಗೆಗೆ ಆನ್‌ಲೈನ್‌ನಲ್ಲೇ ರಸೀದಿ ಲಭ್ಯವಾಗಲಿದೆ. ಪ್ರಾಣಿಗಳನ್ನು ದತ್ತು ಪಡೆದವರಿಗೆ ಇದುವರೆಗೆ ಸಫಾರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರೇ ಪ್ರಮಾಣಪತ್ರ ನೀಡುತ್ತಿದ್ದರು. ಈಗ ಆನ್‌ಲೈನ್‌ನಲ್ಲೇ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News