ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಕೊರೋನ ಸೋಂಕಿನಿಂದ ನಿಧನ

Update: 2021-06-11 16:31 GMT

ಬೆಂಗಳೂರು, ಜೂ.11: ಕನ್ನಡ ಖ್ಯಾತ ಕವಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ, ನಾಡೋಜ ಡಾ.ಸಿದ್ದಲಿಂಗಯ್ಯ (67) ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಒಂದು ತಿಂಗಳ ಹಿಂದೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಡಾ.ಸಿದ್ದಲಿಂಗಯ್ಯ ಅವರಿಗೆ ತೀವ್ರ ಸ್ವರೂಪದ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಅವರನ್ನು ನಗರದ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಸುನೀಗಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಪತ್ನಿ, ಪುತ್ರಿ ಡಾ.ಮಾನಸ, ಪುತ್ರ ಗೌತಮ್ ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಸಿದ್ದಲಿಂಗಯ್ಯ ಅಗಲಿದ್ದಾರೆ.

1954ರ ಫೆಬ್ರವರಿ 3ರಂದು ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಹುಟ್ಟಿದ ಸಿದ್ದಲಿಂಗಯ್ಯ, ಅವರ ತಂದೆಯವರ ಮೂಲನೆಲೆ ಆಗಿನ ಬೆಂಗಳೂರು ಜಿಲ್ಲೆಯ ಮಾಗಡಿಯಾದರೂ ಇವರು ಬಾಲ್ಯ ಕಳೆದದ್ದು ತಾಯಿಯ ಊರಾದ ಮಂಚನಬೆಲೆಯಲ್ಲಿಯೇ. ತಂದೆ ಜೀವನ ನಿರ್ವಹಣೆ ಮಾರ್ಗ ಅರಸಿ ಬೆಂಗಳೂರಿನ ಶ್ರೀರಾಮಪುರಕ್ಕೆ ವಸತಿ ಬದಲಾಯಿಸಿದ ನಂತರ ಸಿದ್ದಲಿಂಗಯ್ಯನವರ ವಿದ್ಯಾಭ್ಯಾಸ ಬೆಂಗಳೂರಿನಲ್ಲಿಯೇ ಮುಂದುವರಿಯಿತು. ವಿದ್ಯಾರ್ಥಿ ದಿಸೆಯಲ್ಲಿಯೇ ಅನೇಕ ಚಳುವಳಿಗಳಲ್ಲಿ ಭಾಗವಹಿಸುತ್ತಾ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಿದ್ದರು.

ಇದೇ ವೇಳೆ 1975ರಲ್ಲಿ `ಹೊಲೆ ಮಾದಿಗರ ಹಾಡು' ಎಂಬ ಕ್ರಾಂತಿಕಾರಕ ಕವನ ಸಂಕಲನ ಪ್ರಕಟಿಸಿದರು. 1976ರಲ್ಲಿ ಬೆಂಗಳೂರು ವಿ.ವಿ.ಯಿಂದ ಸ್ವರ್ಣ ಪದಕದೊಂದಿಗೆ ಎಂ.ಎ. ಪದವಿ ಪಡೆದ ಇವರು, ಪ್ರೊ.ಜಿ.ಎಸ್.ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ `ಗ್ರಾಮ ದೇವತೆಗಳು' ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿವಿ ಯಿಂದ ಡಾಕ್ಟರೇಟ್ ಪದವಿ ಪಡೆದರು. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ ಸಿದ್ಧಲಿಂಗಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರೇ' ಸೇರಿದಂತೆ ಇನ್ನಿತರ ಕವನ ಸಂಕಲಗಳು ಪ್ರಕಟಗೊಂಡಿವೆ. `ಪಂಚಮ, ನೆಲಸಮ, ಏಕಲವ್ಯ' ಅವರ ನಾಟಕಗಳು.

'ಅವತಾರಗಳು' ಪ್ರಬಂಧ ಕೃತಿಯು 1991ರಲ್ಲಿ ಪ್ರಕಟಗೊಂಡಿದೆ. `ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ' ಮುಂತಾದ ಲೇಖನ ಸಂಗ್ರಹಗಳು, `ಸದನದಲ್ಲಿ ಸಿದ್ಧಲಿಂಗಯ್ಯ ಭಾಗ-1 ಮತ್ತು 2' ಸೇರಿದಂತೆ ವಿವಿಧ ಕೃತಿಗಳು ಪ್ರಕಟಗೊಂಡಿವೆ. 

ಅವರ ಆತ್ಮಕಥೆ `ಊರು ಕೇರಿ' ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ಅವರು `ಸಮಕಾಲೀನ ಕನ್ನಡ ಕವಿತೆಗಳು' ಭಾಗ-3 ಮತ್ತು ಭಾಗ-4ನ್ನು ಸಂಪಾದಿಸಿಕೊಟ್ಟಿದ್ದಾರೆ. ಊರುಕೇರಿ ಆತ್ಮಕಥೆ ಇಂಗ್ಲಿಷ್ ಮತ್ತು ತಮಿಳಿಗೆ ಅನುವಾದಗೊಂಡಿವೆ. ಅಲ್ಲದೆ, ಇವರ ಅನೇಕ ಕವನಗಳು ತೆಲುಗು, ತಮಿಳು, ಬಂಗಾಳಿ, ಮಲಯಾಳಂ, ಹಿಂದಿ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ `ಧರಣಿಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಸಿದ್ದಲಿಂಗಯ್ಯ ಬರೆದ ಗೀತೆಗೆ ರಾಜ್ಯಪ್ರಶಸ್ತಿ ಬಂದಿದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆದ 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ, ಡಾ.ಅಂಬೇಡ್ಕರ್ ಶತಮಾನೋತ್ಸವ, ಕರ್ನಾಟಕ ಸಾಹಿತ್ಯ ಅಕಾಡಮಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್, ಬಾಬು ಜಗಜೀವನ ರಾಮ್, ಹಂಪಿ ಕನ್ನಡ ವಿವಿ ನಾಡೋಜ, ನೃಪತುಂಗ, ಪಂಪ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಸಿದ್ದಲಿಂಗಯ್ಯ ಪಾತ್ರರಾಗಿದ್ದಾರೆ.

1988ರಿಂದ 94 ಮತ್ತು 1995ರಿಂದ 2001ರವರೆಗೆ ಎರಡು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮಕರಣಗೊಂಡಿದ್ದ ಸಿದ್ದಲಿಂಗಯ್ಯ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶೋಷಿತ ಸಮುದಾಯದ ಪ್ರತಿನಿಧಿಯಾಗಿ, ದಲಿತರ ಮೂಕವೇದನೆಗೆ ಧ್ವನಿಯಾಗಿ, ಅಲಕ್ಷಿತ ಸಮುದಾಯ ಜೀವನಾನುಭವಗಳನ್ನು ಕಾವ್ಯವಾಗಿಸಿದ ಸಿದ್ದಲಿಂಗಯ್ಯನವರ ಸಾಹಿತ್ಯವೇ ಒಂದು ಪ್ರಮುಖ ಸಾಂಸ್ಕೃತಿಕ ದಾಖಲೆ ಆಗಿದೆ.

ನಾಳೆ ಅಂತ್ಯಕ್ರಿಯೆ

ಬೆಂಗಳೂರಿನ ಜ್ಞಾನಭಾರತಿ ಸಮೀಪದಲ್ಲಿನ ‘ಕಲಾ ಗ್ರಾಮ’ದಲ್ಲಿ ನಾಳೆ(ಜೂ.12)ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಡಾ.ಸಿದ್ದಲಿಂಗಯ್ಯರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News