ಬ್ಲ್ಯಾಕ್‌ ಫಂಗಸ್ ಪ್ರಕರಣ 3 ವಾರದಲ್ಲಿ 150% ಹೆಚ್ಚಳ: 2,100ಕ್ಕೂ ಹೆಚ್ಚು ಸಾವು

Update: 2021-06-11 14:48 GMT

ಹೊಸದಿಲ್ಲಿ, ಜೂ.11: ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರಲ್ಲಿ ಹೆಚ್ಚಾಗಿ ಕಂಡುಬಂದಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಪ್ರಮಾಣ ಕಳೆದ 3 ವಾರಲ್ಲಿ 150% ಹೆಚ್ಚಿದ್ದು 31,216ಕ್ಕೇರಿದೆ. 2,109 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 

ಒಂದೆಡೆ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುತ್ತಿದ್ದರೆ ಇನ್ನೊಂದೆಡೆ ಸೋಂಕಿನ ಚಿಕಿತ್ಸೆಗೆ ಬಳಕೆಯಾಗುವ ಪರಿಣಾಮಕಾರಿ ಔಷಧ ಆ್ಯಂಫೋಟೆರಿಸಿನ್-ಬಿಯ ಕೊರತೆ ಹೆಚ್ಚಿದೆ. 7,507 ಬ್ಲ್ಯಾಕ್ ಫಂಗಸ್ ಪ್ರಕರಣ ಮತ್ತು 609 ಸಾವಿನ ಪ್ರಕರಣದೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದರೆ, 5148 ಪ್ರಕರಣ ಹಾಗೂ 323 ಸಾವಿನ ಪ್ರಕರಣದೊಂದಿಗೆ ಗುಜರಾತ್ ದ್ವಿತೀಯ, 2,976 ಪ್ರಕರಣದೊಂದಿಗೆ ರಾಜಸ್ತಾನ್ ತೃತೀಯ ಸ್ಥಾನದಲ್ಲಿದೆ. 

ಅತ್ಯಧಿಕ ಜನಸಂಖ್ಯೆ ಇರುವ ರಾಜ್ಯವಾದ ಉತ್ತರಪ್ರದೇಶದಲ್ಲಿ 1744 ಪ್ರಕರಣ ಮತ್ತು 142 ಸಾವಿನ ಪ್ರಕರಣ, ದಿಲ್ಲಿಯಲ್ಲಿ 1,200 ಸೋಂಕಿನ ಪ್ರಕರಣ ಮತ್ತು 125 ಸಾವಿನ ಪ್ರಕರಣ ದಾಖಲಾಗಿದೆ. 96 ಪ್ರಕರಣದೊಂದಿಗೆ ಜಾರ್ಖಂಡ್ ಅತೀ ಕಡಿಮೆ ಪ್ರಕರಣ ದಾಖಲಾದ ರಾಜ್ಯವಾಗಿದೆ. ಕರ್ನಾಟಕದಲ್ಲಿ ಸಾವಿನ ಸಂಖ್ಯೆ 188, ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ 23 ಎಂದು ವರದಿಯಾಗಿದೆ. 

ಬ್ಲ್ಯಾಕ್ ಫಂಗಸ್ ಸೋಂಕು ಚಿಕಿತ್ಸೆಗೆ ಮಹಾರಾಷ್ಟ್ರ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ 3 ಶ್ರೇಣಿಯ ಚಿಕಿತ್ಸಾ ದರ ನಿಗದಿಗೊಳಿಸಿದೆ. ಎ,ಬಿ,ಸಿ ಎಂಬ ವರ್ಗೀಕರಣ ಮಾಡಿದ್ದು ವಿಭಿನ್ನ ಶುಲ್ಕ ನಿಗದಿಗೊಳಿಸಲಾಗಿದೆ. ಸೋಂಕಿನ ಚಿಕಿತ್ಸೆಗೆ ಬಳಸುವ ಆ್ಯಂಫೋಟೆರಿಸಿನ್-ಬಿ ಔಷಧವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿರುವ ಪ್ರಮಾಣದ ಬಗ್ಗೆ ವಿವರ ಒದಗಿಸುವಂತೆ ಮತ್ತು ಬ್ಲ್ಯಾಕ್ ಫಂಗಸ್ ಬಗ್ಗೆ ವಿವರ, ಇದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸುವಂತೆ ಬಾಂಬೆ ಹೈಕೋರ್ಟ್ ಈ ವಾರದ ಆರಂಭದಲ್ಲಿ ಕೇಂದ್ರಕ್ಕೆ ಸೂಚಿಸಿತ್ತು. 

ಜೊತೆಗೆ ಅಧಿಕ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರಕ್ಕೆ ಹೆಚ್ಚಿನ ಔಷಧ ಪೂರೈಸುವಂತೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚಿಸಿತ್ತು. ಸಾಂಕ್ರಾಮಿಕ ರೋಗದ ವಿಭಾಗದ ಪ್ರಕರಣಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಸರಕಾರ ಮಾಹಿತಿ ನೀಡಬೇಕು. ಭಾರತದಲ್ಲಿ ಮಧುಮೇಹ ಕಾಯಿಲೆ ಹೆಚ್ಚಿರುವುದು ಬ್ಲ್ಯಾಕ್ ಫಂಗಸ್ ಉಲ್ಬಣಕ್ಕೆ ಕಾರಣವಿರಬಹುದು ಎಂದು ತಜ್ಞರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News