ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

Update: 2021-06-11 15:14 GMT

ಬೆಂಗಳೂರು, ಜೂ. 11: ಕನ್ನಡ ಖ್ಯಾತ ಕವಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ, ನಾಡೋಜ ಡಾ.ಸಿದ್ದಲಿಂಗಯ್ಯ (67) ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದು, ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

''ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ.ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ''
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಸಿದ್ದಲಿಂಗಯ್ಯ ಅವರ ಅಗಲಿಕೆ ಸುದ್ದಿ ಬಹಳ ನೋವು ತಂದಿದೆ. ದಲಿತ ಹೋರಾಟ, ಸಾಮಾಜಿಕ ಸಮಾನತೆಗಾಗಿ ಸಾಹಿತ್ಯದ ಮೂಲಕ ಹೋರಾಟ ಆರಂಭಿಸಿದ ಮಹಾನ್ ಸಾಹಿತಿ ಸಿದ್ದಲಿಂಗಯ್ಯ ಅವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಆತ್ಮಕಥನ, ಸಂಶೋಧನೆ ಪ್ರಾಕಾರಗಳಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿ ಹೋರಾಟ ಮಾಡಿದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅಧ್ಯಾಪಕರು, ಕವಿಗಳು, ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಿದ್ದಲಿಂಗಯ್ಯ ಅವರ ಕೊಡುಗೆ ಅಪಾರ. ಅವರ ಸಾಹಿತ್ಯ ಕ್ಷೇತ್ರದ ಅಪಾರ ಕೊಡುಗೆಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಅವರ ಅಗಲಿಕೆ ದಲಿತ ಹೋರಾಟ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಕನ್ನಡದ ಪ್ರಮುಖ ಲೇಖಕ, `ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು. ಜನನ 1954ರಲ್ಲಿ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಯ್ಯನವರ ಜಿಲ್ಲೆಯಿಂದಲೇ ನಾನು ರಾಜಕೀಯ ಪ್ರವೇಶ ಮಾಡಿದ್ದು ಎಂಬುದನ್ನು ವಿನಮ್ರತೆಯಿಂದ ಸ್ಮರಿಸಿ ಕೊಳ್ಳುತ್ತೇನೆ. `ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ..' ಎರಡು ಚಲನಚಿತ್ರಗಳಲ್ಲಿ ಗೀತೆ ಬಳಕೆ ಮಾಡಿಕೊಳ್ಳಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಗೆಳತಿ ಓ ಗೆಳತಿ...ಇವು ಬಂಡಾಯ ಕವಿಯ ಪ್ರೇಮ ಗೀತೆಗಳು. ಅವರಗೊಳ ಗಿದ್ದ ವ್ಯವಸ್ಥೆಯ ಬಗೆಗಿನ ಕಿಚ್ಚು ಜೊತೆಯಲ್ಲೇ ಒಬ್ಬ ಅಪ್ಪಟ ಪ್ರೇಮಿಯು ಇದ್ದ ಎಂಬುದಕ್ಕೆ ಮೇಲಿನ ಗೀತೆಗಳು ಸದಾ ಹಸಿರು'
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

''ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ವಿಧಾನ ಪರಿಷತ್‍ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ, ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕವಿ, ಸಾಹಿತಿ, ಚಿಂತಕರು ಅಲ್ಲದೆ ಉತ್ತಮ ಭಾಷಣಕಾರರೂ, ಪಂಪ ಪ್ರಶಸ್ತಿ ಪುರಸ್ಕ್ರತರೂ ಹಾಗೂ ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ನಾಡೋಜ ಡಾ. ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿ ಛಾಪನ್ನು ಮೂಡಿಸಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ'
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್, ವಿಧಾನಸಭೆ

''ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಕುರಿತು ಹಲವಾರು ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೃಷಿ ಮಾಡಿದ್ದ ಸಿದ್ದಲಿಂಗಯ್ಯನವರು ಕನ್ನಡದ ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಕೆಲ ತಿಂಗಳುಗಳ ಹಿಂದೆಯಷ್ಟೇ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರೊಂದಿಗೆ ಭಾಗವಹಿಸಿದ್ದು ಇನ್ನೂ ನನ್ನ ಮನದಾಳದಲ್ಲಿ ಹಸಿರಾಗಿದೆ''
-ಬಸವರಾಜ ಹೊರಟ್ಟಿ, ಸಭಾಪತಿ ವಿಧಾನ ಪರಿಷತ್

''ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರು ಕರುಣೆ ಇಲ್ಲದ ಕೊರೋನ ಕೈಗೆ ಸಿಕ್ಕು, `ಊರು ಕೇರಿ' ತೊರೆದು ಹೋಗಿದ್ದಾರೆ. ಇದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತ. ನನ್ನ ಅತ್ಯಂತ ಆತ್ಮೀಯ ಮಿತ್ರರಾಗಿದ್ದರು, ಸಾವಿರಾರು ಶಿಷ್ಯರ ಪಾಲಿಗೆ ಪ್ರೀತಿಯ ಮೇಷ್ಟ್ರು, ಅತ್ಯಂತ ಸರಳ, ನೇರ ನಡೆ, ಸದಾ ಹಾಸ್ಯಭರಿತ ಮಾತುಗಳಿಂದಲೇ ಎದುರಿಗಿದ್ದವರನ್ನು ಮೋಡಿ ಮಾಡುವ ಮಾತುಗಾರ, ಅವರ ಪಿಎಚ್‍ಡಿ ಪ್ರಬಂಧ ಗ್ರಾಮದೇವತೆಗಳು ಮೂಲಕವೇ ಕನ್ನಡ ಸಾಹಿತ್ಯಾಸಕ್ತರ ಮನ ಗೆದ್ದವರು ಸಿದ್ದಲಿಂಗಯ್ಯ. ಅತ್ಯಂತ ಸಣ್ಣ ಗ್ರಾಮ ಒಂದರಿಂದ ಬಂದವರು ವಿದ್ಯೆ ವಂಚಿತ ಜನಾಂಗದ ಮೂಲಕ ಎಲ್ಲ ಜನಾಂಗಕ್ಕೂ ವಿದ್ಯೆ ಹಂಚುವ ಕೆಲಸಕ್ಕೆ ಅವರು ತೊಡಗಿಸಿಕೊಂಡಿದ್ದೆ ಒಂದು ಅದ್ಭುತ. ಕೇವಲ 34 ವರ್ಷದವರಾಗಿದ್ದಾಗಲೇ ವಿಧಾನ ಪರಿಷತ್ತಿನ ಸದಸ್ಯರಾದರು. ಸದನದಲ್ಲಿ ಅವರು ಮಂಡಿಸಿದ ವಿಷಯಗಳು ವೈವಿಧ್ಯಪೂರ್ಣವಾಗಿದ್ದವು ಜೊತೆಗೆ ಅತ್ಯಂತ  ವಿಚಾರಪೂರ್ಣ ವಾಗಿದ್ದವು. ಅಲ್ಲಿ ಅವರು ವಿಷಯ ಮಂಡಿಸುತ್ತಿದ್ದ ರೀತಿ ಇಡೀ ಸದನವನ್ನು ಆಕರ್ಷಿಸಿ ಬಿಡುತ್ತಿತ್ತು'
-ಅರವಿಂದ ಲಿಂಬಾವಳಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News