ಭೂ ಕಳಂಕಿತರು- ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ: ಎಚ್.ವಿಶ್ವನಾಥ್ ಆರೋಪ

Update: 2021-06-11 15:36 GMT

ಮೈಸೂರು, ಜೂ.11: ಭೂ ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು, ಎಲ್ಲವನ್ನೂ ಸಾರಾ ಸಗಟಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿನ್ನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದನ್ನು ಜಾರಿಗೆ ಮಾಡಿ ಎಂದು ಒತ್ತಾಯಿಸಿದ್ದೇನೆ ಎಂದರು.

ಪ್ರಾದೇಶಿಕ ಆಯುಕ್ತರು ಕಳಂಕಿತರ ನಡುವೆ ಒಂದು ರೀತಿಯ ಒಪ್ಪಂದ ಆಗಿರುವಂತೆ ಕಾಣಿಸುತ್ತದೆ. ಈಗಾಗಲೇ ಮಾತನಾಡಿ ಒಂದು ಒಪ್ಪಂದಕ್ಕೆ ಬಂದಂತೆ ಕಾಣಿಸುತ್ತಿದ್ದು, ಅವರ ವರ್ತನೆ ನೋಡಿದರೆ ಏನು ವರದಿ ಬರಬಹುದೆನ್ನುವುದು ಈಗಾಗಲೇ ತಿಳಿದು ಬರುವಂತಿದೆ. ಒಳ ಒಪ್ಪಂದ ನಡೆದು ವರದಿ ರೆಡಿ ಆಗಿದೆ. ವರದಿ ಸೋಮವಾರ ಕೊಡುತ್ತಾರೆ ಎಂಬ ಶಂಕೆ ವ್ಯಕ್ತಪಡಿಸಿದರು.

ನೀವು ನಿಮ್ಮ ಭವನವನ್ನು ಎಷ್ಟು ಎಕರೆಯಲ್ಲಿ ಕಟ್ಟಿದ್ದೀರಿ, ನಿಮಗೆ ಅನುಮೋದನೆ ಆಗಿರೋದು ಎಷ್ಟು, ಮುಡಾ ಭೂಮಿ ಎಷ್ಟು ಒತ್ತುವರಿಯಾಗಿದೆ? ಸ್ವಂತ ಆಸ್ತಿ ಎಷ್ಟಿದೆ, ಇದೆಲ್ಲವನ್ನು ಬಿಟ್ಟಿದ್ದೀರಿ. ನಾಲ್ಕು ಆದೇಶಗಳಲ್ಲೂ ಕೂಡ ರಾಜಕಾಲುವೆ ಪ್ರಸ್ತಾವ ಆಗಿಲ್ಲ. ಪ್ರಸ್ತಾವ ಆಗಿಲ್ಲದಿರುವುದನ್ನು ಹಿಡಿದು ಓಡಾಡುವುದೇಕೆ ಎಂದು ಪ್ರಶ್ನಿಸಿದರು.

ರಾಜಕಾರಣಿಗಳು ಎಲ್ಲರೂ ಸಿದ್ಧ ಹಸ್ತರಿದ್ದೇವೆ. ರಾಜಕಾರಣಿಗಳು ನಾವೇ ಭೂಮಾಫಿಯಾ. ಬೇರೆ ಯಾರು ಬಂದಾರು ಇಲ್ಲಿ? ಅದಕ್ಕಾಗಿ ಪ್ರಾದೇಶಿಕ ಆಯುಕ್ತರು ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ. ವರದಿ ಈಗಾಗಲೇ ಸಿದ್ಧಪಡಿಸಿದ್ದು, ಇಂದು ಸರ್ವೆಗೆ ಹೋಗಿದ್ದಾರೆ. ಸರಪಳಿ ಅಲ್ಲಿಂದ, ಇಲ್ಲಿಂದು ಎಳೆದು ಇಲ್ಲಿ ಏನು ಇಲ್ಲ ಸರ್ ಅಂದು ಬಿಡುತ್ತಾರೆ. ಅದಕ್ಕೆ ನಾನು ಈ ಹಿಂದೆ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಅವರಿಗೆ ಹೊಡಿತಾರೆ ಅಂತ ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಹಾಗೆಯೇ ಆಗಿದೆ. ಈಗಲೂ ಅದಕ್ಕೆ ಮೊದಲೇ ಮಾಧ್ಯಮದವರನ್ನು ಕರೆದಿದ್ದೇನೆ. ನಿಮಗೆ ವಿಷಯ ತಿಳಿಸಿದ್ದೇನೆ. ಸೋಮವಾರ ಪ್ರಾದೇಶಿಕ ಆಯುಕ್ತರು ಭೂಕಳಂಕಿತರ ಬಗ್ಗೆ ನೀಡುವ ವರದಿ ಯಾರೂ ನಂಬತಕ್ಕದ್ದಲ್ಲ ಎಂದರು.

ಆರ್ಸಿ ಕಚೇರಿ ಹತ್ತಿರ ಚಳವಳಿಗೆ ಬಂದು ಕುಳಿತಾಗಲೇ ಗೊತ್ತು, ಇವರು ಏನು ಪ್ಲಾನ್ ಮಾಡಿದ್ದಾರೆ ಅಂತ. ರೋಹಿಣಿ ಸಿಂಧೂರಿಯವರು ನೀಡಿದ ನಾಲ್ಕು ಆದೇಶದ ಬಗ್ಗೆಯೂ ಸೂಕ್ತ, ಸಮಗ್ರ ಪರಿಶೀಲನೆ ಆಗಬೇಕು. ಅದು ಬಿಟ್ಟು ಸಣ್ಣದೊಂದನ್ನು ಹಿಡಿದುಕೊಂಡು ಹೋಗುತ್ತಿರುವುದು ಯಾಕೆ? 98 ಸರ್ವೆ ನಂಬರ್ ಮುಡಾದ್ದು. ಮುಡಾ ಆಯುಕ್ತರು, ಅಧ್ಯಕ್ಷರು ಏನು ಮಾಡುತ್ತಿದ್ದೀರಿ ? ಅಮೂಲಾಗ್ರ ವಿಚಾರಣೆ ಆಗಬೇಕು. ಇಷ್ಟೆ ಅಲ್ಲ, ಮೈಸೂರು ನಗರದಲ್ಲಿ ಬೇಕಾದಷ್ಟು ಆಗಿದೆ. ಎಲ್ಲವೂ ಸಂಪೂರ್ಣ ತನಿಖೆ ಆಗಲಿ, ನಗರಾಭಿವೃದ್ಧಿ ಮಂತ್ರಿಗಳು, ರೆವೆನ್ಯೂ ಮಂತ್ರಿಗಳು ಕೂಡ ಮಾತಾಡುತ್ತಿಲ್ಲ, ಮಾತಾಡಬೇಕು. ಇದು ಸರ್ಕಾರ. ಕಳಂಕಿತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬಂದು ಒಳ ಒಪ್ಪಂದ ಮಾಡಿಕೊಂಡರು ಎಂದು ಆರೋಪಿಸಿದರು.

ಪ್ರಾದೇಶಿಕ ಆಯುಕ್ತರ ಮೇಲೆ ನಮಗೆ ನಂಬಿಕೆ ಇಲ್ಲ. ಕಳಂಕಿತರೇ ಪ್ರತಿಭಟನೆಗೆ ಕುಳಿತು ನನ್ನ ಸಾರಾ ಕನ್ವೆನ್ಶನ್ ರಾಜಕಾಲುವೆ ಮೇಲೆ ಹೋಗಿದೆಯೇ ಅಷ್ಟು ಹೇಳಿ ಅಂತಾರೆ. ಬೇರೆ ಯಾವುದಾರ ಬಗ್ಗೆ ಮಾತಾಡಲ್ಲ. ರೋಹಿಣಿಯವರ ಆದೇಶದಲ್ಲಿ ಇರದ್ದನ್ನು ತನಿಖೆ ಮಾಡಿಸಲು ಹೇಳುತ್ತಿದ್ದಾರೆ. ಅದನ್ನು ತನಿಖೆ ಮಾಡಿಸಿ ಆದೇಶದಲ್ಲಿರುವುದನ್ನು ಮುಚ್ಚಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ನನಗೆ ಅವರ ಮೇಲೆ ಯಾವ ದ್ವೇಷವೂ ಇಲ್ಲ. ಭೂಗಳ್ಳ ಅನ್ನೋ ಕಳಂಕದಿಂದ ಹೊರಬರಲಿ ಅನ್ನೋ ಉದ್ದೇಶವೇ ಹೊರತು ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News