ಬಂದಾ ವಿ.ವಿ.ಯ 24 ಬೋಧಕ ಹುದ್ದೆಗೆ 11 ಮಂದಿ ‘ಸಿಂಗ್’ಗಳ ನೇಮಕ: ಬಿಜೆಪಿ ಶಾಸಕ ಆರೋಪ ‌

Update: 2021-06-11 17:13 GMT
Photo:  Facebook/@brajeshprajapatibjp

ಲಕ್ನೋ, ಜೂ. 11: ಬಂದಾ ಕೃಷಿ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿ ಅವರ ಜಾತಿಯಾದ ಠಾಕೂರರಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿ ಬಂದಾ ಜಿಲ್ಲೆಯ ತಿಂದ್ವಾರಿಯ ಬಿಜೆಪಿ ಶಾಸಕ ಬ್ರಜೇಶ್ ಕುಮಾರ್ ಪ್ರಜಾಪತಿ ಅವರು ಪತ್ರ ಬರೆದಿದ್ದಾರೆ. 

ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಗೆ ಬರೆದ ಪತ್ರದಲ್ಲಿ ಬ್ರಜೇಶ್ ಕುಮಾರ್, ಬಂದಾ ವಿ.ವಿ.ಯಲ್ಲಿ ಖಾಲಿ ಇದ್ದ 40 ಬೋಧಕ ಹುದ್ದೆಗಳಿಗೆ ಮೀಸಲಾತಿ ಬದಿಗೆ ಸರಿಸಿ ನೇಮಕ ಮಾಡಲಾಗಿದೆ. ಇದರಲ್ಲಿ ನೇಮಕರಾದ ಕನಿಷ್ಠ 11 ಮಂದಿ ‘ಸಿಂಗ್’ ಉಪ ನಾಮದವರು ಇದ್ದಾರೆ ಎಂದಿದ್ದಾರೆ.

ಇದು ಸಾಂಪ್ರದಾಯಿಕವಾಗಿ ‘ಸಿಂಗ್’ ಎಂಬ ಉಪ ನಾಮವನ್ನು ಬಳಸುವ ಹಾಗೂ ಮುಖ್ಯಮಂತ್ರಿ ಅವರ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನುಕೂಲಕರವಾಗಿ ಹುದ್ದೆಗಳನ್ನು ನೀಡುವ ಪ್ರಯತ್ನವೆಂದು ಪತ್ರದಲ್ಲಿ ಪ್ರತಿಪಾದಿಸಿದಂತೆ ಕಂಡು ಬಂದಿದೆ. 

ಬಂದಾ ವಿಶ್ವವಿದ್ಯಾನಿಲಯ ಇದುವರೆಗೆ ನೇಮಕ ಮಾಡಿಕೊಂಡವರ ಪೈಕಿ 24 ಅಭ್ಯರ್ಥಿಗಳ ಪಟ್ಟಿ ‘The print’ ಲಭ್ಯವಾಗಿದೆ ಹಾಗೂ ಪಟ್ಟಿಯಲ್ಲಿ 11 ಮಂದಿ ‘ಸಿಂಗ್’ ಉಪ ನಾಮದವರು ಇರುವುದರಿಂದ ಶಾಸಕರ ಪ್ರತಿಪಾದನೆ ಸತ್ಯವೆಂದು ಕಂಡು ಬಂದಿದೆ. ಆದರೆ, ಎಲ್ಲರೂ ‘ಠಾಕೂರ’ರೇ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ, ಉತ್ತರಪ್ರದೇಶದಲ್ಲಿ ಇತರ ಕೆಲವು ಜಾತಿಗಳು ಕೂಡಾ ‘ಠಾಕೂರ್’ ಎಂಬ ಉಪ ನಾಮ ಬಳಸುತ್ತಾರೆ. 

ಶಾಸಕರ ಪತ್ರ ‘ಠಾಕೂರ್ ರಾಜ್’ ಎಂದು ಆರೋಪಿಸಿರುವುದು ಈಗ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅಲ್ಲದೆ, ಮುಖ್ಯಮಂತ್ರಿ ಆದಿತ್ಯನಾಥ್ ಅವರು ತಮ್ಮ ‘ಠಾಕೂರ್’ ಸಮುದಾಯದ ಪರವಾಗಿದ್ದಾರೆ ಎಂದು ಬಿಜೆಪಿ ಹಾಗೂ ಪ್ರತಿಪಕ್ಷದ ಹಲವು ನಾಯಕರು ಆರೋಪಿಸಿದ್ದಾರೆ. 

ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ ವೌರ್ಯ ಅವರ ನಡುವೆ ವೈಮನಸ್ಸು ಇದೆ ಎಂಬ ವದಂತಿ ಎದ್ದಿರುವ ನಡುವೆ ಶಾಸಕ ಶಾಸಕ ಬ್ರಜೇಶ್ ಕುಮಾರ್ ಪ್ರಜಾಪತಿ ಈ ಪತ್ರ ಬರೆದಿದ್ದಾರೆ. ಒಬಿಸಿ ನಾಯಕರಾಗಿರುವ ಬ್ರಜೇಶ್ ಕುಮಾರ್ ಕೇಶವ ವೌರ್ಯ ಅವರಿಗೆ ಆಪ್ತರು. ಈ ನೇಮಕಾತಿ ಬಗ್ಗೆ ತನಿಖೆ ನಡೆಸುವಂತೆ ಬ್ರಜೇಶ್ ಕುಮಾರ್ ಪ್ರಜಾಪತಿ ಆಗ್ರಹಿಸಿದ್ದಾರೆ. ಅಲ್ಲದೆ, ನೇಮಕಾತಿಯನ್ನು ರದ್ದುಗೊಳಿಸಿ ಮೀಸಲಾತಿಯೊಂದಿಗೆ ಜಾಹೀರಾತನ್ನು ಮತ್ತೊಮ್ಮೆ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News