'ನಿಮಗೆ ಕ್ಷೌರ ಮಾಡಿದರೆ ಬೇರೆ ಜನಾಂಗದವರು ಇಲ್ಲಿಗೆ ಬರಲ್ಲ': ದಲಿತರ ಕೂದಲು ಕತ್ತರಿಸಲು ಒಪ್ಪದ ಕ್ಷೌರಿಕ

Update: 2021-06-11 17:10 GMT

ದಾವಣಗೆರೆ, ಜೂ.11: ದಲಿತರಿಗೆ ಕ್ಷೌರ ಮಾಡಲು ಒಪ್ಪದ ಕ್ಷೌರಿಕನ ವರ್ತನೆ ಖಂಡಿಸಿ ದಲಿತರು ಕ್ಷೌರಿಕನ ಜತೆ ವಾಗ್ವಾದ ನಡೆದ ಘಟನೆ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮೂರು ಅಂಗಡಿಗಳ ಪೈಕಿ ಅಣ್ಣಪ್ಪ ಎಂಬುವರ ಒಂದು ಅಂಗಡಿ ಮಾತ್ರ ತೆರೆದಿತ್ತು. ಕ್ಷೌರ ಮಾಡಿಸಲು ಗ್ರಾಮದ ಕೆಲ ದಲಿತರು ಅಂಗಡಿಗೆ ಬಂದಾಗ ನಿಮಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ದಲಿತರು ನಮಗೆ ಏಕೆ ಕ್ಷೌರ ಮಾಡಲ್ಲ, ನಾವು ಕ್ಷೌರ ಮಾಡಿಸಲು ಹರಿಹರಕ್ಕೆ ಹೋಗಿ ಬರಲು ಇನ್ನೂರು ರೂ. ಖರ್ಚಾಗುತ್ತದೆ. ನಾವು ಹಣ ನೀಡಿದರೂ ನೀವೇಕೆ ಕ್ಷೌರ ಮಾಡಲ್ಲ ಎಂದು ಪ್ರಶ್ನಿಸಿದರು.

'ನಾನು ನಿಮಗೆ ಕ್ಷೌರ ಮಾಡಿದರೆ ಬೇರೆ ಜನಾಂಗದವರು ಇಲ್ಲಿಗೆ ಕ್ಷೌರಕ್ಕೆ ಬರಲ್ಲ. ಹೀಗಾಗಿ ನಿಮಗೆ ನಾನು ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕ ಪ್ರತಿಕ್ರಿಯಿಸಿದ್ದಾರೆ. ಆಗ ದಲಿತ ಸಮಾಜದ ಯುವಕರು ಸಮಾಜ ಕಲ್ಯಾಣ ಸಹಾಯಕ ನಿದೇಶಕ ಸೈಯದ್ ನಾಸಿರುದ್ದೀನ್‍ರಿಗೆ ಫೋನ್ ಮಾಡಿ ನಡೆದ ಘಟನೆ ತಿಳಿಸಿದ್ದಾರೆ.

ನಾಸೀರುದ್ದೀನ್ ಅವರು ಪೊಲೀಸರೊಂದಿಗೆ ತಕ್ಷಣ ಗ್ರಾಮಕ್ಕೆ ತೆರಳಿ ಕ್ಷೌರಿಕನ ಅಂಗಡಿಗೆ ಭೇಟಿ ನೀಡಿದರು. 'ಜಾತಿ, ಜನಾಂಗ ಆಧರಿಸಿ ಕ್ಷೌರ ಮಾಡುವುದಿಲ್ಲ ಎಂದರೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ನಿನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕಾಗುತ್ತದೆ. ಯಾರೇ ಗ್ರಾಹಕರು ಬಂದರೂ ನೀನು ಕ್ಷೌರ ಮಾಡಬೇಕು. ಅವರು, ಹೇಳಿದ್ದಾರೆ, ಇವರು ಹೇಳಿದ್ದಾರೆಂದರೆ ಕೇಳುವುದಿಲ್ಲ. ನಿನ್ನ ವೃತ್ತಿಯನ್ನು ನೀನು ಮಾಡಬೇಕು. ನಿನ್ನ ವಿರುದ್ಧ ದೂರು ದಾಖಲಾದರೆ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ. ಇದು ಮೊದಲ ಬಾರಿಯಾಗಿರುವುದರಿಂದ ಎಚ್ಚರಿಕೆ ಕೊಡುತ್ತಿದ್ದೇವೆ' ಎಂದು ಅಣ್ಣಪ್ಪರಿಗೆ ತಿಳಿ ಹೇಳಿದರು.

ಜೊತೆಗೆ ಸ್ಥಳದಲ್ಲಿದ್ದರಿಗೂ ಕೂಡ, 'ಕ್ಷೌರಿಕನ ಮೇಲೆ ಒತ್ತಡ ಹಾಕಬೇಡಿ. ಒಂದು ಗ್ರಾಮವೆಂದರೆ ಎಲ್ಲಾ ಜಾತಿ, ಜನಾಂಗದವರೂ ಇರುತ್ತಾರೆ. ಈ ರೀತಿ ಕ್ಷೌರದ ವಿಷಯದಲ್ಲಿಯೂ ಜಾತಿ, ಜನಾಂಗದ ತಾರತಮ್ಯತೆ ಮಾಡುವುದು ಬೇಡ. ನಿಮ್ಮ ಒತ್ತಡದಿಂದಾಗಿ ಕ್ಷೌರಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಧೂಳೆಹೊಳೆ ಗ್ರಾಮದಲ್ಲಿ ಮುಂಚಿನಂತೆ ಸಾಮರಸ್ಯತೆ ಕಾಪಾಡಿ' ಎಂದು ಬುದ್ಧಿ ಮಾತು ಹೇಳಿದರು.

ಕ್ಷೌರಿಕ ಅಣ್ಣಪ್ಪ ಹಾಗೂ ಹಾಗೂ ಗ್ರಾಮಸ್ಥರು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿತು. ಲಾಕ್‍ಡೌನ್ ಮುಗಿದ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದೆಂದು ನಾಸಿರುದ್ದೀನ್ ಗ್ರಾಮಸ್ಥರಿಗೆ ತಿಳಿಸಿದರು.

ಕೋವಿಡ್‍ನಿಂದ ಇಡೀ ಜಗತ್ತು ಸಂಕಷ್ಟದಲ್ಲಿದೆ. ಜನ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹದ್ದರಲ್ಲೂ ಮಾನವೀಯತೆ ಮರೆತು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿರುವುದು ಬೇಸರ ತಂದಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ದೇವಸ್ಥಾನ, ಹೋಟಲ್, ಕ್ಷೌರದಂಗಡಿಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಇಂದಿಗೂ ಜೀವಂತ ಇರುವ ಅಸ್ಪೃಶ್ಯತೆ ಸಮಸ್ಯೆಗೆ ತಾಲೂಕಿನ ಅಧಿಕಾರಿಗಳು, ಮಠಾಧೀಶರು, ಜನಪ್ರತಿನಿಧಿಗಳು, ಸಮಾಜ ಸುಧಾರಕರು ಸೇರಿ ಕೊನೆ ಹಾಡಿ, ಸಾಮರಸ್ಯತೆ ಮೂಡಿಸಬೇಕಿದೆ. ಆ ಮೂಲಕ ದಸಂಸ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ ಹುಟ್ಟೂರು ಹರಿಹರವನ್ನು ಸಾಮರಸ್ಯದ ನೆಲೆಯಾಗಿಸಬೇಕಿದೆ.

-ಪಿ.ಜೆ.ಮಹಾಂತೇಶ್, ದಸಂಸ ತಾಲೂಕು ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News