2021-22ನೇ ಸಾಲಿನ ಶೈಕ್ಷಣಿಕ ದಾಖಲಾತಿ ಜೂ.15ರಿಂದ ಆರಂಭ

Update: 2021-06-11 17:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.11: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2021-22ನೇ ಸಾಲಿನ ಮಕ್ಕಳ ಶಾಲಾ ಪ್ರವೇಶ, ದಾಖಲಾತಿ ಆಂದೋಲನ ಹಾಗೂ ಶಾಲಾ ಹಂತದ ವಾರ್ಷಿಕ ಕ್ರಿಯಾಯೋಜನೆಯನ್ನು ಜೂ.15ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಆಯುಕ್ತರು, 2021-22ನೇ ಶೈಕ್ಷಣಿಕ ಸಾಲಿನ ಪೂರ್ವ ಸಿದ್ಧತೆಗಳು ಜೂ.15ರಿಂದ 30ರವರೆಗೆ ನಡೆಯಲಿದೆ. ಆ ನಂತರ ಜು.1ರಿಂದ ಶಾಲೆ ಪ್ರಾರಂಭವಾದಾಗ ಸಂದರ್ಭಾನುಸಾರ ತರಗತಿ ಬೋಧನೆಗೆ ಆಫ್‍ಲೈನ್ ಮತ್ತು ಆನ್‍ಲೈನ್ ವಿಧಾನಗಳ ಮೂಲಕ ಮಕ್ಕಳನ್ನು ಶೈಕ್ಷಣಿಕವಾಗಿ ತಲುಪುವ ಕಾರ್ಯತಂತ್ರಗಳನ್ನು ತಯಾರಿಸಬೇಕೆಂದು ತಿಳಿಸಲಾಗಿದೆ.

ಆಫ್‍ಲೈನ್, ಆನ್‍ಲೈನ್ ಬೋಧನೆ ಕುರಿತು ಜೂ.15ರಿಂದ 30 ಒಳಗಾಗಿ  ಶಿಕ್ಷಣ ಇಲಾಖೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಕಾರ್ಯಯೋಜನೆ ರೂಪಿಸಲು ಕಾರ್ಯತಂತ್ರಗಳ ಹಂತಗಳನ್ನು ನೀಡಲಾಗಿದೆ, ಇದರ ಪ್ರಯುಕ್ತ ಶಾಲಾ ಹಂತದಲ್ಲಿ ಶಿಕ್ಷಕರು, ಎಸ್‍ಡಿಎಂಸಿ, ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್, ನಗರ ಸಭೆ, ಪುರಸಭೆ, ಮಹಾನಗರ ಪಾಲಿಕೆ ಸೇರಿ ಇತರೆ ಇಲಾಖೆಯ ಕಾರ್ಯಕರ್ತರು, ಸ್ವಯಂ ಸೇವಕರು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರ ಪಡೆದು ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕೆಂದು ಸೂಚಿಸಲಾಗಿದೆ.

1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಪೋಷಕರಲ್ಲಿ ಇರುವ ತಾಂತ್ರಿಕ ಸಾಧನಗಳ ಲಭ್ಯತೆಯ ಕುರಿತ ಮಾಹಿತಿಯು ಶಾಲೆಯ ಶಿಕ್ಷಕರ ಬಳಿ ಇರಬೇಕು. ಕಳೆದ ಸಾಲಿನಲ್ಲಿ ಈ ಮಾಹಿತಿಯನ್ನು ಶಾಲೆಗಳು ಸಂಗ್ರಹ ಮಾಡಿದ್ದು, ಇದೇ ಮಾಹಿತಿಯನ್ನು ಈ ವರ್ಷ ಪರಿಷ್ಕರಿಸಬೇಕೆಂದು ಶಿಕ್ಷಣ ಇಲಾಖೆ ಹೇಳಿದೆ.

ಮುಖ್ಯಾಂಶ: ಯಾವುದೇ ಮೊಬೈಲ್ ಸಂಪರ್ಕ, ದೂರದರ್ಶನ ಚಂದನ ವಾಹಿನಿ ಲಭ್ಯತೆ ಇಲ್ಲದಿರುವ ವಿದ್ಯಾರ್ಥಿಗಳಿಗೆ ಮನೆಯ ಹತ್ತಿರದ ನೆರೆಯವರ ಮನೆಯಲ್ಲಿ ದೂರದರ್ಶನ ಪಾಠಗಳನ್ನು ವೀಕ್ಷಿಸಲು ಪೋಷಕರಿಗೆ ಗುರುತಿಸಲು ಕೋರಬಹುದು. ಇಂತಹ ವಿದ್ಯಾರ್ಥಿಗಳು ನೆರೆಯವರ ಮೊಬೈಲ್ ಸಂಖ್ಯೆ ಪಡೆಯಲು ಸಾಧ್ಯವೇ ಎಂದು ಗುರುತಿಸಿ ದೂರದರ್ಶನದಲ್ಲಿ ಬರುವ ಪಾಠಗಳನ್ನು ಡೌನ್‍ಲೋಡ್ ಮಾಡಿಕೊಂಡು ಆಫ್‍ಲೈನ್ ಮೂಲಕ ವೀಕ್ಷಿಸುವ ವ್ಯವಸ್ಥೆ ಮಾಡುವುದು.

ಆನ್‍ಲೈನ್-ಆಫ್‍ಲೈನ್ ಕಲಿಕಾ ಮಾದರಿಗಳು

-ಶಿಕ್ಷಣ ಇಲಾಖೆಯು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡುವ ಸಂವೇದ ವಿಡಿಯೋ ಪಾಠಗಳು

-ಆಕಾಶವಾಣಿ ಮೂಲಕ ಪ್ರಸಾರ ಮಾಡುವ ರೇಡಿಯೋ ಪಾಠಗಳು.

-ಮಕ್ಕಳ ಸಹಾಯವಾಣಿ ಯೂಟ್ಯೂಬ್ ಚಾನಲ್ ಮುಂತಾದವುಗಳಲ್ಲಿ ಮುಕ್ತ ಪಠ್ಯ ಸಂಬಂಧಿತ ಪಾಠಗಳು.

-ದೀಕ್ಷಾ ಆ್ಯಪ್, ಪೋರ್ಟಲ್‍ನಲ್ಲಿ ಸಿಗುವ ವಿಡಿಯೋ ಪಾಠಗಳು.

-ಶಿಕ್ಷಕರು ಮಾಡುವ ಮುದ್ರಿತ ಆಡಿಯೋ ಪಾಠಗಳು.

-ವಿದ್ಯಾರ್ಥಿಯು ತಾನೆ ಕಲಿತ ಪಾಠಗಳು.

-ಸ್ವಲಿಕೆ ಸಾಮಗ್ರಿಗಳ ಬಳಕೆ.

-ಜೀವನ ಕೌಶಲ್ಯಗಳಾದ ಮನೆಗೆಲಸ, ವೃತ್ತಿಪರ ಕೆಲಸಗಳು, ವ್ಯವಹಾರಿಕ ಜ್ಞಾನ, ಕ್ರೀಡೆ, ಸಾಂಪ್ರದಾಯಿಕ ಮತ್ತು ಗ್ರಾಮೀಣ ಕ್ರೀಡೆಗಳ ಕುರಿತು ಪರಿಚಯಾತ್ಮಕ ತರಗತಿಗಳ ನಿರ್ವಹಣೆಗೆ ಒತ್ತುಕೊಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News