​ದೇಶದಲ್ಲೇ ಪ್ರಥಮ : ಈ ನಗರದಲ್ಲಿ ಮನೆಮನೆಗೆ ಕೋವಿಡ್ ಲಸಿಕೆ

Update: 2021-06-13 03:41 GMT

ಜೈಪುರ: ರಾಜಸ್ಥಾನದ ಬಿಕನೇರ್ ನಗರ ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದ ಅಂಗವಾಗಿ ಮನೆಬಾಗಿಲಿಗೆ ಕೋವಿಡ್-19 ಲಸಿಕೆ ತಲುಪಿಸುವ ಅಭಿಯಾನವನ್ನು ಆರಂಭಿಸಿದ್ದು, ದೇಶದಲ್ಲೇ ಈ ವಿನೂತನ ಪ್ರಯತ್ನ ಆರಂಭಿಸಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಕನೇರ್‌ನಲ್ಲಿ ಆರಂಭಿಸಿರುವ ಈ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಇದಕ್ಕಾಗಿ ರಾಜಸ್ಥಾನ ಸರ್ಕಾರ ಸಹಾಯವಾಣಿ ಆರಂಭಿಸಿದ್ದು, ಜನತೆ ತಾವೇ ತಮ್ಮ ಹೆಸರು ಮತ್ತು ವಿಳಾಸವನ್ನು ವಾಟ್ಸ್ಆ್ಯಪ್ ಮೂಲಕ ನೀಡಿ ಕೋವಿಡ್-19 ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಬಿಕನೇರ್‌ನಲ್ಲಿ ಹೀಗೆ ನೋಂದಾಯಿಸಿಕೊಂಡವರಿಗೆ ಲಸಿಕೆ ನೀಡಲು ಎರಡು ಆ್ಯಂಬುಲೆನ್ಸ್ ಮತ್ತು ಮೂರು ಸಂಚಾರಿ ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ.

ಆದರೆ ಕನಿಷ್ಠ 10 ಮಂದಿ ನೋಂದಾಯಿಸಿಕೊಂಡರೆ ಮಾತ್ರ ಲಸಿಕೆ ವ್ಯಾನ್ ಜನರ ಮನೆ ತಲುಪುತ್ತದೆ. ಲಸಿಕೆ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಈ ಷರತ್ತು ವಿಧಿಸಲಾಗಿದೆ. ಒಂದು ಸೀಸೆ ಲಸಿಕೆಯಲ್ಲಿ 10 ಡೋಸ್‌ಗಳನ್ನು ನೀಡಬಹುದಾಗಿದೆ. ಲಸಿಕೆ ನೀಡಿದ ತಕ್ಷಣ ಲಸಿಕೆ ವ್ಯಾನ್ ಮುಂದಿನ ವಿಳಾಸಕ್ಕೆ ತೆರಳುತ್ತದೆ. ಆದರೆ ವೈದ್ಯಕೀಯ ತಂಡ ಅಲ್ಲೇ ಇದ್ದು, ಲಸಿಕೆ ಪಡೆದವರ ಆರೋಗ್ಯದ ಮೇಲೆ ನಿಗಾ ಇಡುತ್ತದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ’ಲೈವ್ ಹಿಂದೂಸ್ತಾನ್’ ವರದಿ ಮಾಡಿದೆ.

16 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಈ ನಗರ ಹೊಂದಿದ್ದು, ಇಲ್ಲಿನ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಲಸಿಕಾ ತಂಡದ ಕಾರ್ಯಾಚರಣೆ ಮೇಲೆ ಕಣ್ಣಿಟ್ಟಿರುತ್ತವೆ. ಮೂರನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟ ಶೇಕಡ 75ರಷ್ಟು ಮಂದಿಗೆ ಲಸಿಕೆ ನೀಡುವುದು ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ನಮಿತ್ ಮೆಹ್ತಾ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮನೆಮನೆಗೆ ಲಸಿಕೆ ವಿತರಿಸುವುದು ಪರಿಣಾಮಕಾರಿ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News