ದೇಶ ಕೈಗೊಂಡಿರುವ ಯುದ್ಧಗಳ ಮಾಹಿತಿಯನ್ನು ಹಂತ ಹಂತವಾಗಿ ಬಹಿರಂಗಪಡಿಸಲಾಗುವುದು : ರಕ್ಷಣಾ ಸಚಿವಾಲಯ

Update: 2021-06-13 06:39 GMT
ಫೈಲ್ ಫೋಟೊ

ಹೊಸದಿಲ್ಲಿ: ದೇಶ ಕೈಗೊಂಡಿರುವ ಯುದ್ಧಗಳ ಮಾಹಿತಿಯನ್ನು ಹಂತ ಹಂತವಾಗಿ ಬಹಿರಂಗಪಡಿಸುವ ಮಹತ್ವದ ನಿರ್ಧಾರವನ್ನು ರಕ್ಷಣಾ ಸಚಿವಾಲಯ ಕೈಗೊಂಡಿದೆ.

ಮಿಲಿಟರಿ ಕಾರ್ಯಾಚರಣೆಗಳ ಮಾಹಿತಿ ಸಂಗ್ರಹ, ಬಹಿರಂಗಪಡಿಸುವಿಕೆ, ಕ್ರೋಢೀಕರಣ ಮತ್ತು ಪ್ರಕಟಣೆ ಕುರಿತ ಹೊಸ ನೀತಿಯನ್ನು ಸಚಿವಾಲಯ ಅನುಮೋದಿಸಿದೆ.

ಹೊಸ ನೀತಿಯು ಹೆಚ್ಚಿನ ಪಾರದರ್ಶಕತೆಯನ್ನು ತರಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ನೀತಿಯ ಅನ್ವಯ ಯುದ್ಧ ಅಥವಾ ಪ್ರಮುಖ ಕಾರ್ಯಾಚರಣೆ ನಡೆದ ಎರಡು ವರ್ಷಗಳ ಒಳಗಾಗಿ ಜಂಟಿ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸುವುದು ಕಡ್ಡಾಯ. ಈ ಸಮಿತಿಯಲ್ಲಿ ಸಶಸ್ತ್ರ ಪಡೆಗಳ ಪ್ರತಿನಿಧಿಗಳು, ಗೃಹ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯಗಳ ಪ್ರತಿನಿಧಿಗಳೂ ಇರುತ್ತಾರೆ.

"ಆದ್ದರಿಂದ ದಾಖಲೆಗಳ ಸಂಗ್ರಹ ಮತ್ತು ಜೋಡಿಸುವಿಕೆ ಮೂರು ವರ್ಷಗಳ ಒಳಗೆ ಪೂರ್ಣಗೊಳ್ಳುತ್ತದೆ ಹಾಗೂ ಸಂಬಂಧಪಟ್ಟ ಎಲ್ಲರಿಗೂ ವಿತರಿಸಲಾಗುತ್ತದೆ. ಸಕಾಲಿಕವಾಗಿ ಯುದ್ಧ ಇತಿಹಾಸಗಳನ್ನು ಪ್ರಕಟಿಸುವುದರಿಂದ ಜನತೆಗೆ ಘಟನಾವಳಿಗಳ ನಿಖರ ಮಾಹಿತಿ ಸಿಗುತ್ತದೆ ಹಾಗೂ ಶೈಕ್ಷಣಿಕ ಸಂಶೋಧನೆ ಮತ್ತು ವದಂತಿಗಳಿಗೆ ತೆರ ಎಳೆಯಲು ಅಧಿಕೃತ ಮಾಹಿತಿ ಲಭ್ಯವಾಗುತ್ತದೆ" ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದಿನ ಯುದ್ಧ ಮತ್ತು ಕಾರ್ಯಾಚರಣೆಗಳ ಬಗ್ಗೆ, ಈಗಾಗಲೇ ಸಂಗ್ರಹಿಸಿರುವ ದಾಖಲೆಗಳನ್ನು ಹಂತ ಹಂತವಾಗಿ ಬಹಿರಂಗಪಡಿಸಲು ಕೂಡಾ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News