ಪಶ್ಚಿಮ ಬಂಗಾಳ:ಬಿಜೆಪಿ ಬೆಂಬಲಿಸಿದ್ದಕ್ಕೆ ಮೈಕು ಕಟ್ಟಿ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಿರುವ ಕಾರ್ಯಕರ್ತರು

Update: 2021-06-13 08:22 GMT
photo: Indian express

ಕೋಲ್ಕತಾ: ಟಿಎಂಸಿಯ ಅನೇಕ  ಬಂಡಾಯ ನಾಯಕರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಮತ್ತೆ ಬೆಂಬಲಿಸಲು ಬಯಸಿದ್ದು,ಇದೀಗ ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಬೀದಿಗಿಳಿದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. ಇ-ರಿಕ್ಷಾಗಳಿಗೆ ಮೈಕ್ ಕಟ್ಟಿ ಸಾರ್ವಜನಿಕ ಪ್ರಕಟಣೆ ನೀಡುತ್ತಿದ್ದುಬಿಜೆಪಿಯನ್ನು "ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ" ಎಂದು ಘೋಷಿಸುತ್ತಿದ್ದಾರೆ .

ತನ್ನ ಕಾರ್ಯಕರ್ತರ  ಸಾರ್ವಜನಿಕ ಕ್ಷಮೆಯಾಚನೆಯ ಹಿಂದೆ ಟಿಎಂಸಿಯ  ಬೆದರಿಕೆ ತಂತ್ರಗಳು ಇವೆ ಎಂದು ಬಿಜೆಪಿ ಆರೋಪಿಸಿದೆ.

ಬಂಗಾಳದಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಚುನಾವಣೋತ್ತರ ಹಿಂಸಾಚಾರ ನಡೆದಿದೆ ಎಂದು ಬಿಜೆಪಿ ಹಾಗೂ  ರಾಜ್ಯಪಾಲ ಜಗದೀಪ್ ಧಂಕರ್ ಅವರು ರಾಜ್ಯ ಸರಕಾರದ ಮೇಲೆ  ವಾಗ್ದಾಳಿ  ನಡೆಸುತ್ತಿದ್ದರೂ, ಬಿಜೆಪಿ ಕಾರ್ಯಕರ್ತರು ಈಗ ಸಾರ್ವಜನಿಕ ಸಭೆಗಳಲ್ಲಿ ಟಿಎಂಸಿ ಬಳಿ  ಕ್ಷಮೆಯಾಚಿಸುತ್ತಿದ್ದಾರೆ.

 “ಬಿಜೆಪಿ ನಮ್ಮ ಮನವೊಲಿಸಿತು. ಇದು ಮೋಸದ ಪಕ್ಷ. ಗೌರವಾನ್ವಿತ ಸಿಎಂ ಮಮತಾ ಬ್ಯಾನರ್ಜಿಗೆ ಪರ್ಯಾಯವಾಗಿ ನಮ್ಮಲ್ಲಿ ಯಾರೂ ಇಲ್ಲ. ನಾವು ಅವರ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಲು ಬಯಸುತ್ತೇವೆ’’ ಎಂದು ಬೋಲ್ಪುರದ ವಾರ್ಡ್ ಸಂಖ್ಯೆ 18ರ ಕಾರ್ಯಕರ್ತರು  ಸಾರ್ವಜನಿಕ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

 “ನಾನು ಬಿಜೆಪಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ನಾವು ಟಿಎಂಸಿಗೆ ಸೇರಲು ಬಯಸುತ್ತೇನೆ’’ ಎಂದು ಬಿಜೆಪಿ ಕಾರ್ಯಕರ್ತ ಮುಕುಲ್ ಮಂಡಲ್  ಹೇಳಿದ್ದಾರೆ.

ಸೈಂಥಿಯಾದಲ್ಲಿ, 300 ಬಿಜೆಪಿ ಕಾರ್ಯಕರ್ತರ ಗುಂಪು ಪ್ರಮಾಣವಚನ ಸ್ವೀಕರಿಸಿದ ನಂತರ ಟಿಎಂಸಿಗೆ ವಾಪಸಾಗಿದ್ದಾರೆ.

 “ನಾವು ಬಿಜೆಪಿಗೆ ಹೋಗಿ ತಪ್ಪು ಮಾಡಿದ್ದೆವು. ಮಮತಾ ಬ್ಯಾನರ್ಜಿಯ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಲು ನಾವು ಇಂದಿನಿಂದ ಟಿಎಂಸಿಗೆ ಸೇರುತ್ತಿದ್ದೇವೆ’’ ಎಂದು ಕಾರ್ಯಕರ್ತನೊಬ್ಬ ಹೇಳಿದ್ದಾರೆ.

 “ನಾನು ಬಿಜೆಪಿಯಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಅಭಿವೃದ್ಧಿಯಲ್ಲಿ ಭಾಗವಹಿಸಲು ನಾನು ಟಿಎಂಸಿಗೆ ಸೇರುತ್ತೇನೆ”ಎಂದು ಬಿಜೆಪಿ ಯುವ ಮೋರ್ಚಾ ಮಂಡಲ್ ಮಾಜಿ  ಅಧ್ಯಕ್ಷ ತಪಸ್ ಸಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News