ಪೊಲೀಸರ ಹಲ್ಲೆಯಿಂದ ಮಾನಸಿಕ ಅಸ್ವಸ್ಥ ಸಾವು ಆರೋಪ : 8 ಪೊಲೀಸರು ಅಮಾನತು

Update: 2021-06-13 09:26 GMT

ಮಡಿಕೇರಿ ಜೂ.13 : ಮಾನಸಿಕ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ರಾಯ್ ಡಿಸೋಜ (50) ಎಂಬವರಿಗೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಅವರು ಮೃತಪಟ್ಟರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರುಗಳು ವಿರಾಜಪೇಟೆಗೆ ಭೇಟಿ ನೀಡಿದ್ದು, ಓರ್ವ ಪಿಎಸ್‌ಐ, 5 ಪಿಸಿ ಹಾಗೂ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದರು.

ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಲಿದೆ, ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲ ಸಿ.ಸಿ.ಕ್ಯಾಮರಾಗಳನ್ನು ತನಿಖೆಗೆ ಒಳಪಡಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.

ಮಗನ ಸಾವಿಗೆ ಕಾರಣಕರ್ತರಾದ ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ರಾಯ್ ಡಿಸೋಜ ಅವರ ತಾಯಿ ಮೆಟೆಲ್ಡಾ ಲೋಬೊ ಒತ್ತಾಯಿಸಿದ್ದಾರೆ.

ಸಾಂತ್ವನ ಹೇಳಿದ ಮಾಜಿ ಸಿಎಂ

ರಾಯ್ ಡಿಸೋಜ ಅವರ ಮನೆಗೆ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮತ್ತಿತರ ಪ್ರಮುಖರು ಭೇಟಿ ನೀಡಿ ಮೃತರ ತಾಯಿ ಮೆಟೆಲ್ಡಾ ಲೋಬೊ ಹಾಗೂ ಸಹೋದರ ರಾಬಿನ್ ಡಿಸೋಜಾ ಅವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮೊಬೈಲ್ ಫೋನ್ ಮೂಲಕ ತಾಯಿಯೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದರು.

ಪೊಲೀಸರ ಅಮಾನತ್ತಾಗಿದ್ದರೂ ಹೋದ ಜೀವವನ್ನು ತಂದುಕೊಡಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಚರ್ಚಿಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ತಾಯಿ ಮೆಟೆಲ್ಡಾ ಲೋಬೊ ಮಾತನಾಡಿ ಪುತ್ರ ರಾಯ್ ಅನುಭವಿಸಿದ ನೋವನ್ನು ಮಾಜಿ ಮುಖ್ಯಮಂತ್ರಿಗಳ ಬಳಿ ವಿವರಿಸಿ ಕಣ್ಣೀರು ಹಾಕಿದರು. ಪೊಲೀಸರನ್ನು ಅಮಾನತು ಮಾಡಿದರೆ ಸಾಲದು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಮಗ ತಪ್ಪು ಮಾಡಿದ್ದರೆ ಲಾಕ್ ಅಪ್ ನಲ್ಲಿಡಬಹುದಿತ್ತು, ಆದರೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಜೆಡಿಎಸ್ ಪದಾಧಿಕಾರಿಗಳು ಹಾಗೂ ಕ್ರೈಸ್ತ ಸೇವಾ ಸಂಘದ ಕೆ.ಟಿ.ಬೇಬಿ ಮ್ಯಾಥ್ಯು, ಜಾನ್ಸನ್ ಪಿಂಟೋ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ರಾಯ್ ಡಿಸೋಜ ಅಂತ್ಯ ಸಂಸ್ಕಾರ

ಮೃತ ರಾಯ್ ಡಿಸೋಜ ಅವರ ಅಂತ್ಯ ಸಂಸ್ಕಾರ ಇಂದು ವಿರಾಜಪೇಟೆಯಲ್ಲಿ ನಡೆಯಿತು. ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿತ್ತು.

ಅಂತ್ಯಕ್ರಿಯೆ ಸಂದರ್ಭ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ರೋಮನ್ ಕ್ಯಾಥೋಲಿಕ್ ಆಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಪಟ್ಟಣ ಪಂಚಾಯತ್ ಸದಸ್ಯ ಬೆನ್ನಿ ಅಗಸ್ಟಿನ್, ನಗರಸಭಾ ಮಾಜಿ ಸದಸ್ಯರುಗಳಾದ ಕೆ.ಜೆ. ಪೀಟರ್, ಗಿಲ್ಬರ್ಟ್ ಲೋಬೋ ಮತ್ತಿತರರು ಹಾಜರಿದ್ದು, ರಾಯ್ ಡಿಸೋಜ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News