ಕಾಂಗ್ರೆಸ್ ಹೋರಾಟ ತೆರಿಗೆ ಇಳಿಸಲೋ ಅಥವಾ ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸಲೋ?: ಕುಮಾರಸ್ವಾಮಿ ಪ್ರಶ್ನೆ

Update: 2021-06-13 11:54 GMT

ಬೆಂಗಳೂರು, ಜೂ. 13: `ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯ ಸರಕಾರಗಳೆರಡು ವಿಧಿಸುತ್ತಿರುವ ಅತ್ಯಧಿಕ ತೆರಿಗೆ ಇಳಿಸುವ ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು ಜೆಡಿಎಸ್ ಒತ್ತಾಯ. ಜತೆಗೆ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಡುವುದೂ ನಮ್ಮ ನಿಲುವು. ಇದರ ಸುತ್ತಲೇ ನಾವು ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಾ ಜಿಎಸ್ಟಿಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. ಜಿಎಸ್ಟಿಗೆ ಸೇರಿಸುವುದೇ ಕಾಂಗ್ರೆಸ್ ಉದ್ದೇಶವಾಗಿದ್ದರೆ ಅದು ಶೋಷಣೆ ಪರವಾದ ಹೋರಾಟ' ಎಂದು ಟೀಕಿಸಿದ್ದಾರೆ.

'ಅಂದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈಗ ಒಂದು ಲೀಟರ್ ಪೆಟ್ರೋಲ್ ಮೇಲೆ 60 ರೂ.ನಿಂದ 65 ರೂ.ತೆರಿಗೆ ಹಣ ಸಿಗುತ್ತಿದೆ. ಆದರೆ, ಎರಡೂ ಸರಕಾರಗಳೂ ಲೀಟರ್ ಪೆಟ್ರೋಲ್ ಮೇಲೆ ಸಂಗ್ರಹಿಸುವ ಹಣ 30 ರೂ.ಮೀರಬಾರದು. ಆಗ ಪೆಟ್ರೋಲ್ 65ರಿಂದ 70 ರೂ.ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ' ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

'ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ. ಬದಲಿಗೆ ಕೇಂದ್ರ ಈಗ ವಿಧಿಸುತ್ತಿರುವ ಮಿತಿಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ.68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯ' ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

`ಪೆಟ್ರೋಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಜನರಿಗೆ ತಕ್ಷಣಕ್ಕೆ ಬೆಲೆ ಇಳಿದಂತೆ ಅನ್ನಿಸಬಹುದು. ಆದರೆ, ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುತ್ತಲೇ ಅದರ ಮೇಲಿನ ತೆರಿಗೆಯಿಂದ ಬರುತ್ತಿದ್ದ ಸಂಪನ್ಮೂಲ ರಾಜ್ಯಗಳ ಕೈತಪ್ಪಿ ಹೋಗುತ್ತದೆ. ಎಲ್ಲ ತೆರಿಗೆಯೂ ಕೇಂದ್ರದ ಪಾಲಾಗಿ ರಾಜ್ಯಗಳು ಸಂಪನ್ಮೂಲ ಬರ ಎದುರಿಸುತ್ತವೆ. ರಾಜ್ಯಗಳ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

`ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್-ಬಿಜೆಪಿಗಳೆರಡೂ ಆ ಶೋಷಣೆ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‍ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಪೆಟ್ರೋಲ್ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್ ಉದ್ದೇಶವಲ್ಲ, ಅದನ್ನು ಜಿಎಸ್ಟಿಗೆ ಸೇರಿಸುವುದಷ್ಟೇ ಅದರ ಉದ್ದೇಶ ಎಂಬುದು ಸಾಬೀತಾಗಿದೆ. ಆದರೆ ಅದರ ಅಪಾಯ ಕಾಂಗ್ರೆಸ್‍ಗೆ ಗೊತ್ತಿಲ್ಲ' ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಏರಿಸುತ್ತಿದೆ. ಇತ್ತ ಕಾಂಗ್ರೆಸ್ ದೇಶದಾದ್ಯಂತ ಹೋರಾಡುತ್ತಿದೆ. ಪೆಟ್ರೋಲ್ ಬೆಲೆ ಇಳಿಯಬೇಕಿದ್ದರೆ ಅದನ್ನು ಜಿಎಸ್ಟಿಗೆ ಸೇರಿಸಬೇಕೆಂದು ಕೇಂದ್ರ ಹೇಳಿದರೆ, ಕಾಂಗ್ರೆಸ್ ಕೂಡ ಅದನ್ನೇ ಪ್ರತಿಪಾದಿಸಿದೆ. ಹಾಗಾದರೆ, ಕಾಂಗ್ರೆಸ್ ಹೋರಾಡುತ್ತಿರುವುದು ಬೆಲೆ ಇಳಿಸಲೋ ಅಥವಾ ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸಲೋ?'

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News