ರಾಜ್ಯ ಬಿಜೆಪಿಯ ಅಸಮಾಧಾನ ಅರುಣ್ ಸಿಂಗ್ ಶಮನ ಮಾಡಲಿದ್ದಾರೆ: ಸಚಿವ ಡಾ.ಕೆ.ಸುಧಾಕರ್

Update: 2021-06-13 12:08 GMT

ಬೆಂಗಳೂರು, ಜೂ. 13: `ಪತಿ-ಪತ್ನಿಯ ನಡುವೆ ಅಸಮಾಧಾನ ಇರುತ್ತದೆ. ಹೀಗಿರುವಾಗ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ. ಅಸಮಾಧಾನ ಇರುವವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಾರೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಧಾಕರ್, ಮುಂದಿನ ವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರು. ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಗೊಂದಲಗಳಿಗೆ ತೆರೆ ಎಳೆಯುತ್ತಾರೆ. ಅಸಮಾಧಾನ ಸರಿಪಡಿಸಿ ಸಮಾಧಾನ ಮಾಡುತ್ತಾರೆ. ಆಡಳಿತಕ್ಕೆ ಇನ್ನೂ ಯಾವ ರೀತಿ ಚುರುಕು ಮುಟ್ಟಿಸಬೇಕೆಂದು ಚರ್ಚೆ ಮಾಡಲಿದ್ದಾರೆ ಎಂದರು.

ಈಗಾಗಲೇ ಯಡಿಯೂರಪ್ಪನವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆಂದು ಅರುಣ್ ಸಿಂಗ್ ಅವರೇ ಸ್ಪಷ್ಟಪಡಿಸಿದ್ದಾರೆ. ಎಲ್ಲ ಹಿರಿಯ ನಾಯಕರೂ ಇದನ್ನೇ ಹೇಳಿದ್ದಾರೆ. ನಾಯಕತ್ವದ ಚರ್ಚೆ ಅನಾವಶ್ಯಕ. ಶಾಸಕ ಅರವಿಂದ ಬೆಲ್ಲದ್ ಹೊಸದಿಲ್ಲಿಗೆ ತೆರಳಿದ್ದರ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಕೋವಿಡ್ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಜನರು ಆಗಮಿಸುತ್ತಿದ್ದು, ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಕೋವಿಡ್ ಟೆಸ್ಟಿಂಗ್ ಹೆಚ್ಚು ಮಾಡಿದ್ದೇವೆ. ಜೂ.14 ರಿಂದ ಅನ್‍ಲಾಕ್ ಮಾಡುತ್ತಿದ್ದು, ಜನರು ಏಕಾಏಕಿ ಮುಗಿಬೀಳುವುದು ಸರಿಯಲ್ಲ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಪಾಲಿಸಬೇಕು. ಸೋಂಕು ಇನ್ನೂ ಗಂಭೀರವಾಗಿದೆ ಎಂದು ಸುಧಾಕರ್ ಎಚ್ಚರಿಸಿದರು.

ಕೋವಿಡ್ ಸೋಂಕಿನಿಂದ ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಜನ ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಸಲಹೆ ನೀಡಿದ ಸುಧಾಕರ್, ಕೆಲವು ಔಷಧ, ವೈದ್ಯಕೀಯ ಪರಿಕರಗಳ ಮೇಲಿನ ಜಿಎಸ್ಟಿ ಕೇಂದ್ರ ಸರಕಾರ ಇಳಿಕೆ ಮಾಡಿದೆ. ಇದರಿಂದ ಸ್ವಾಭಾವಿಕವಾಗಿ ದರ ಇಳಿಯುತ್ತೆ. ಸರಕಾರಕ್ಕೂ ದರ ಕಮ್ಮಿಯಾಗುತ್ತದೆ ಎಂದು ಇದೆ ವೇಳೆ ಪ್ರತಿಕ್ರಿಯೆ ನೀಡಿದರು.

ನಿನ್ನೆ 3.5 ಲಕ್ಷ ಡೋಸ್ ಕೋವಿಡ್ ಲಸಿಕೆ ಕೇಂದ್ರದಿಂದ ಬಂದಿದೆ. ಈ ತಿಂಗಳಲ್ಲೇ 80 ಲಕ್ಷ ಡೋಸ್ ಹಾಕುತ್ತೇವೆ. ಇಲ್ಲಿಯವರೆಗೆ 1.68 ಕೋಟಿ ಡೋಸ್ ಹಾಕಿದ್ದೇವೆ. ದೇಶದಲ್ಲಿ ನಮ್ಮ ರಾಜ್ಯ ಆರನೇ ಸ್ಥಾನದಲ್ಲಿದೆ. ನಮಗೆ ಬಂದ ಲಸಿಕೆ ಪೈಕಿ ಶೇ.98ರಷ್ಟು ಲಸಿಕೆ ಕೊಟ್ಟಿದ್ದೇವೆ. ಮುಂದೆ ಕೇಂದ್ರವೇ ನಮಗೆ ಲಸಿಕೆ ಕೊಡಲಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.

ಹೊಸದಿಲ್ಲಿಗೆ ಹೋಗಿ ಬರುವುದರಲ್ಲಿ ಏನು ವಿಶೇಷ ಇಲ್ಲ. ಏನೇನೋ ಕೆಲಸ ಇರುತ್ತೆ ಎಂದು ಕೆಲವರು ದಿಲ್ಲಿಗೆ ಹೋಗುತ್ತಿರುತ್ತಾರೆ. ದಿಲ್ಲಿಗೆ ಹೋಗಿ ಬರುವುದೇ ಅಪರಾಧ ಎಂದರೆ ನಮ್ಮಂತಹವರು ದಿಲ್ಲಿಗೆ ಹೋಗುವುದು ಬೇಡವೇ? ಎಂದು ಆಲೋಚಿಸಬೇಕಾಗುತ್ತೆ. ನಾನು ಹೊಸದಿಲ್ಲಿಗೆ ಹೋಗಿ ಒಂದೂವರೆ ವರ್ಷವೇ ಆಯಿತು

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News