ಮಾನಸಿಕ ಅಸ್ವಸ್ಥ ಸಾವು ಪ್ರಕರಣ: ತಮ್ಮ ರಕ್ಷಣೆಗಾಗಿ ಪೊಲೀಸರು ಕಟ್ಟುಕಥೆ ಕಟ್ಟಿದ್ದಾರೆ- ಕೆಪಿಸಿಸಿ ವಕ್ತಾರ ಪೊನ್ನಣ್ಣ

Update: 2021-06-13 13:03 GMT

ಮಡಿಕೇರಿ, ಜೂ.13: ವಿರಾಜಪೇಟೆಯ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಅವರ ಸಾವು ಪೊಲೀಸರ ಹಲ್ಲೆಯಿಂದಲೇ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಹಾಗೂ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಪೊಲೀಸರಿಂದ ದೌರ್ಜನ್ಯ ಹೆಚ್ಚಾಗಿದೆ. ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.

ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ರಾಯ್ ಡಿಸೋಜ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾ ತನಿಖೆ ನಡೆದು ಸತ್ಯ ಹೊರಬರಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ತಮ್ಮ ರಕ್ಷಣೆಗೋಸ್ಕರ ಪೊಲೀಸರು ಕಟ್ಟುಕಥೆ ಕಟ್ಟಿದ್ದಾರೆ. ಕೆಲವು ಪೊಲೀಸರ ಅಮಾನತಿನಿಂದ ನ್ಯಾಯ ದೊರಕುವುದಿಲ್ಲ. ಹಿರಿಯ ಅಧಿಕಾರಿಗಳು ಕೂಡ ಇದಕ್ಕೆ ಜವಾಬ್ದಾರರು ಎಂದು ಅವರು ಟೀಕಿಸಿದ್ದಾರೆ. 

ಡಿ.ಜಿ-ಐ.ಜಿ.ಪಿ ಪ್ರವೀಣ್ ಸೂದ್ ಅವರೊಂದಿಗೆ ಪ್ರಕರಣದ ಕುರಿತು ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ, ಯಾರನ್ನೂ ರಕ್ಷಿಸುವ ಪ್ರಯತ್ನ ನಡೆಯಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಪೊನ್ನಣ್ಣ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News