ಸೋಮವಾರದಿಂದ ರಾಜ್ಯದ 20 ಜಿಲ್ಲೆಗಳಲ್ಲಿ ಕೋವಿಡ್ ಲಾಕ್‍ಡೌನ್ ಸಡಿಲಿಕೆ

Update: 2021-06-13 14:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 13: ಕೋವಿಡ್ ಸೋಂಕಿನ ಎರಡನೆ ಅಲೆ ತಡೆಗಟ್ಟಲು ಸುಮಾರು ಒಂದೂವರೆ ತಿಂಗಳಿಂದ ಕೋವಿಡ್ ಕರ್ಫ್ಯೂ ಮತ್ತು ಲಾಕ್‍ಡೌನ್‍ನಿಂದ ಸಂಪೂರ್ಣ ಸ್ತಬ್ಧವಾಗಿದ್ದ ಕರ್ನಾಟಕ ನಾಳೆ(ಜೂ.14)ಯಿಂದ ಕೊಂಚ ಯಥಾಸ್ಥಿತಿಗೆ ಬರಲಿದೆ.

ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಿರುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ಬೆಂ.ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು ಸಹಿತ 11 ಜಿಲ್ಲೆಗಳನ್ನು ಹೊರತುಪಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಸಲಾಗಿದೆ. ಮೇಲ್ಕಂಡ 11 ಜಿಲ್ಲೆಗಳಲ್ಲಿ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ.

ಜೂ.14ರ ಬೆಳಗ್ಗೆ 6 ಗಂಟೆಯಿಂದ ಜೂ.21ರ ಬೆಳಗ್ಗೆ 6 ಗಂಟೆಯ 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದ್ದು, ಆಸ್ಪತ್ರೆ, ಆ್ಯಂಬುಲೆನ್ಸ್, ಹಾಲು, ಮಾಧ್ಯಮ ಸಹಿತ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ಪ್ರತಿನಿತ್ಯ ಬೆಳಗ್ಗೆ 6ರಿಂದ 10ಗಂಟೆಯ ವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸಹಿತ ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ.

ಚಟುವಟಿಕೆ ಪುನರ್ ಆರಂಭ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿರುವ ರಾಜಧಾನಿ ಬೆಂಗಳೂರು ಸೇರಿದಂತೆ 20 ಜಿಲ್ಲೆಗಳಲ್ಲಿ ನಾಳೆ(ಜೂ.14) ಬೆಳಗ್ಗೆ ಲಾಕ್‍ಡೌನ್ ಸಡಿಲಗೊಳಿಸಿದ್ದು, ಎಲ್ಲ ಕಾರ್ಖಾನೆಗಳು ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿದೆ. ಗಾರ್ಮೆಂಟ್ಸ್ ಶೇ.30ರಷ್ಟು ಸಿಬ್ಬಂದಿ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

ಅಗತ್ಯ ವಸ್ತಗಳ ಅಂಗಡಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ತೆರೆಯಲು ಅವಕಾಶ, ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಕಬ್ಬಿಣ, ಸಿಮೆಂಟ್ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಉದ್ಯಾನವನಗಳು(ಪಾರ್ಕ್) ಬೆಳಗ್ಗೆ 5ರಿಂದ 10ಗಂಟೆಯ ವರೆಗೆ, ಬೀದಿಬದಿ ವ್ಯಾಪಾರಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ವಹಿವಾಟು ನಡೆಸಲು ಒಪ್ಪಿಗೆ ನೀಡಲಾಗಿದೆ. ಆಟೋ ರಿಕ್ಷಾ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ, ಸರಕು ಸೇವೆ ಸಾಗಾಣೆ, ಆನ್‍ಲೈನ್ ಸೇವೆಗಳು, ನಿರ್ಬಂಧ ಸಡಿಲಿಸಿರುವ 20 ಜಿಲ್ಲೆಗಳಲ್ಲಿ ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಕರ್ಫ್ಯೂ: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಮತ್ತು ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿನಿತ್ಯ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ಕೋವಿಡ್ ನೈಟ್ ಕರ್ಫ್ಯೂ. ಈ ಸಂದರ್ಭದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯ ವರೆಗೆ ವಾರಂತ್ಯದ ಕರ್ಫ್ಯೂ ಹೇರಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News