'ಮದ್ಯ ಮಾಫಿಯಾ'ದಿಂದ ಬೆದರಿಕೆಯಿದೆ ಎಂದು ದೂರಿದ ಮರುದಿನವೇ ಶಂಕಾಸ್ಪದ 'ಅಪಘಾತದಲ್ಲಿ' ಉತ್ತರ ಪ್ರದೇಶ ಪತ್ರಕರ್ತನ ಸಾವು

Update: 2021-06-14 06:31 GMT
ಪತ್ರಕರ್ತ ಸುಲಭ್ ಶ್ರೀವಾಸ್ತವ (Photo: Twitter/@SulabhSrivasta5)

ಲಕ್ನೋ: ಉತ್ತರ ಪ್ರದೇಶದ ಪ್ರತಾಪಘರ್ ಜಿಲ್ಲೆಯಲ್ಲಿ ಮದ್ಯ ಮಾಫಿಯಾ ಕುರಿತು ತಾನು ಮಾಡಿದ ವರದಿ ನಂತರ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶನಿವಾರವಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರಿದ್ದ 'ಎಬಿಪಿ ನ್ಯೂಸ್' ಮತ್ತದರ ಪ್ರಾದೇಶಿಕ ಘಟಕವಾದ 'ಎಬಿಪಿ ಗಂಗಾ' ವಾಹಿನಿಗಳಿಗೆ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುಲಭ್ ಶ್ರೀವಾಸ್ತವ ರವಿವಾರ ರಾತ್ರಿ ಪೊಲೀಸರು ನೀಡಿದ ಮಾಹಿತಿಯಂತೆ 'ಮೋಟಾರ್ ಸೈಕಲ್ ಅಪಘಾತ'ದಲ್ಲಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.

ವರದಿಗಾರಿಕೆ ಮುಗಿಸಿ ತಮ್ಮ ದ್ವಿಚಕ್ರವಾಹನದಲ್ಲಿ ಅವರು ಮರಳುತ್ತಿದ್ದಾಗ ರಾತ್ರಿ ಸುಮಾರು 11 ಗಂಟೆಗೆ ಇಟ್ಟಿಗೆ ಫ್ಯಾಕ್ಟರಿಯೊಂದರ ಸಮೀಪ ಅವರು ಬೈಕ್‍ನಿಂದ ಬಿದ್ದರು. ಆಗ ಅಲ್ಲಿದ್ದ ಕೆಲ ಕಾರ್ಮಿಕರು ಅವರ ಫೋನ್ ಬಳಸಿ ಸ್ನೇಹಿತರಿಗೆ ಕರೆ ಮಾಡಿ ಹಾಗೂ ಆ್ಯಂಬುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು,'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

"ಬೈಕ್‍ನಲ್ಲಿ ಅವರೊಬ್ಬರೇ ಇದ್ದರು ಹಾಗೂ ಅವರ ವಾಹನ ರಸ್ತೆ ಬದಿಯಲ್ಲಿದ್ದ ಹ್ಯಾಂಡ್ ಪಂಪ್‍ಗೆ ಢಿಕ್ಕಿ ಹೊಡೆದಿತ್ತು,'' ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಅಪಘಾತ ಸ್ಥಳದಲ್ಲಿ ಶ್ರೀವಾಸ್ತವ ಅವರ ಮೃತದೇಹದ ಫೋಟೋ ತೆಗೆಯಲಾಗಿದ್ದು, ಅದರಲ್ಲಿ ಅವರ ಮುಖಕ್ಕೆ ಗಾಯಗಳಾಗಿರುವುದು, ಅವರ ಶರ್ಟ್ ಸಂಪೂರ್ಣ ತೆಗೆದು ಹಾಕಲಾಗಿರುವುದು ಹಾಗೂ ಅವರ ಪ್ಯಾಂಟ್ ಗುಂಡಿಗಳನ್ನು ಬಿಚ್ಚಿ ಕೆಳಕ್ಕೆ ಜಾರಿಸಲಾಗಿರುವುದು ಕಾಣುತ್ತದೆ ಎಂದು ndtv.com ವರದಿ ಮಾಡಿದೆ.

ತಮ್ಮ ಜೀವಕ್ಕೆ ಅಪಾಯವಿದೆಯೆಂದು ಅವರು ದೂರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪತ್ರಕರ್ತ ಶ್ರೀವಾಸ್ತವ್ ಸಾವಿನ ಕುರಿತಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ಟ್ವೀಟ್ ಮಾಡಿ ಆದಿತ್ಯನಾಥ್ ಸರಕಾರವನ್ನು ಟೀಕಿಸಿದ್ದಾರೆ.

"ಮದ್ಯ ಮಾಫಿಯಾ  ಆಲಿಘರ್‍ನಿಂದ ಪ್ರತಾಪ್‍ಘರ್ ತನಕ ಜೀವಗಳನ್ನು ಬಲಿ ಪಡೆದಿದೆ ಹಾಗೂ ಉತ್ತರ ಪ್ರದೇಶ ಸರಕಾರ ಮೌನವಾಗಿದೆ. ಪತ್ರಕರ್ತರು  ಸತ್ಯ ಬಯಲಿಗೆಳೆಯಲು ಅಪಾಯಕಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ  ಆದರೆ ಸರಕಾರ ನಿದ್ದೆಯಲ್ಲಿದೆ,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News