ಕೊರೋನದಿಂದ ಮೃತಪಟ್ಟ ಬಿಪಿಎಲ್ ಕಾರ್ಡ್‌ದಾರರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ ಘೋಷಣೆ

Update: 2021-06-14 12:04 GMT

ಬೆಂಗಳೂರು, ಜೂ. 14: `ಕೋವಿಡ್-19 ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಮನಗಂಡು, ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್ ಸೋಂಕಿನಿಂದ ವಯಸ್ಕರು ಮೃತಪಟ್ಟಲ್ಲಿ, ಆ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ನೀಡಲು ತೀರ್ಮಾನಿಸಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರೆ, ಬಿಪಿಎಲ್ ಕುಟುಂಬಕ್ಕೆ ಒಬ್ಬ ವ್ಯಕ್ತಿಗೆ ಮಾತ್ರ ಕೋವಿಡ್ ಪರಿಹಾರ ವಿತರಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30 ಸಾವಿರದಷ್ಟಿದೆ. ಆ ಪೈಕಿ ಬಿಪಿಎಲ್ ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರವೇ ಪರಿಹಾರ ನೀಡಲಾಗುವುದು. ಇದಕ್ಕಾಗಿ 250 ರಿಂದ 300 ಕೋಟಿ ರೂ.ವಿನಿಯೋಗಿಸಲಾಗುತ್ತದೆ. ಕೋವಿಡ್ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ. ಹೀಗಾಗಿ ದೇಶದಲ್ಲೇ ಮೊದಲ ಬಾರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಓರ್ವ ಸದಸ್ಯನಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದ ಯಡಿಯೂರಪ್ಪ, ಈಗಾಗಲೇ ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಬೀದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಸಮುದಾಯಗಳಿಗೆ ಪರಿಹಾರದ ಪ್ಯಾಕೇಜ್ ಪ್ರಕಟಿಸಲಾಗಿದೆ ಎಂದರು.

'ಕಲಬೆರಕೆ ಹಾಲು' ಸಿಐಡಿ ತನಿಖೆ

ಮಂಡ್ಯ ಹಾಲು ಒಕ್ಕೂಟದಲ್ಲಿ ಕಲಬೆರಕೆ ಹಾಲು ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಮಂದಿಯನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೆ, ಮಂಡ್ಯ ಹಾಲು ಒಕ್ಕೂಟಕ್ಕೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು.

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News