ತಾಜ್ ಮಹಲ್ ಸಹಿತ ಇತರ ಸ್ಮಾರಕಗಳು ಜೂ.16 ರಿಂದ ಪ್ರವಾಸಿಗರಿಗೆ ಮುಕ್ತ

Update: 2021-06-14 12:55 GMT

ಹೊಸದಿಲ್ಲಿ:ಕೋವಿಡ್ -19 ಎರಡನೇ ಅಲೆಯ  ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಮುಚ್ಚಿದ ತಾಜ್ ಮಹಲ್  ಇತರ ಕೇಂದ್ರ ಸರಕಾರದಿಂದ  ಸಂರಕ್ಷಿಸಲ್ಪಡುತ್ತಿರುವ ಸ್ಮಾರಕಗಳು ಜೂನ್ 16 ರಂದು ಮತ್ತೆ ತೆರೆಯಲಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ತಿಳಿಸಿದೆ.

ಸಂದರ್ಶಕರು ಆನ್‌ಲೈನ್‌ನಲ್ಲಿ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಹಾಗೂ  ಯಾವುದೇ ಆಫ್‌ಲೈನ್ ಬುಕ್ಕಿಂಗ್ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಈಗಿನ  ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು / ತಾಣಗಳು ಹಾಗೂ  ವಸ್ತುಸಂಗ್ರಹಾಲಯಗಳನ್ನು (ಎಎಸ್ಐ ಅಡಿಯಲ್ಲಿ) 16.06.2021 ರಿಂದ ತೆರೆಯಬೇಕೆಂದು ನಿರ್ಧರಿಸಲಾಗಿದೆ" ಎಂದು ಸಂಸ್ಕೃತಿ ಹಾಗೂ  ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್ -19 ರ ಎರಡನೇ ಅಲೆ ಕಾಣಿಸಿಕೊಂಡ ತಕ್ಷಣ ತಾಜ್ ಮಹಲ್, ಕೆಂಪು ಕೋಟೆ ಹಾಗೂ  ಅಜಂತ ಗುಹೆಗಳು ಸೇರಿದಂತೆ ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು ಹಾಗೂ  ವಸ್ತು ಸಂಗ್ರಹಾಲಯಗಳನ್ನು ಎಪ್ರಿಲ್ 15 ರಂದು ಮುಚ್ಚಲು ಸರಕಾರ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News