ಕೋವಿಡ್ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ರಾಜ್ಯದಲ್ಲಿ ತೆರಿಗೆ ಸಂಗ್ರಹ ತೃಪ್ತಿಕರ: ಸಿಎಂ ಯಡಿಯೂರಪ್ಪ

Update: 2021-06-14 14:51 GMT

ಬೆಂಗಳೂರು, ಜೂ. 14: `ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿನ ಪ್ರತಿಕೂಲ ಪರಿಸ್ಥಿತಿಯೂ ರಾಜ್ಯದಲ್ಲಿ ತೆರಿಗೆ ಸಂಗ್ರಹ ತೃಪ್ತಿಕರವಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್ ನಿರ್ಬಂಧಗಳನ್ನು ಹಿಂಪಡೆದ ನಂತರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದ ಅವರು, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆಗಳ ತೆರಿಗೆ ಸಂಗ್ರಹ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ, ಸೋರಿಕೆ ತಡೆಗಟ್ಟಿ ಸಂಪನ್ಮೂಲ ಕ್ರೋಢಿಕರಣಕ್ಕೆ ಆಸ್ಥೆ ವಹಿಸಲು ಸೂಚನೆ ನೀಡಿದರು.

ವಾಣಿಜ್ಯ ತೆರಿಗೆ: ರಾಜ್ಯದಲ್ಲಿ 2020-21ರಲ್ಲಿ 82,443 ಕೋಟಿ ರೂ.ತೆರಿಗೆ ಸಂಗ್ರಹದ ಗುರಿಗೆ ಎದುರಾಗಿ 82,462 ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ 65,659 ಕೋಟಿ ರೂ. ಜಿಎಸ್ಟಿ ಮೂಲಕ, ಪೆಟ್ರೋಲ್/ಡೀಸೆಲ್ ಮೇಲಿನ ತೆರಿಗೆ ಮೂಲಕ 15,861ಕೋಟಿ ರೂ. ಹಾಗೂ ವೃತ್ತಿ ತೆರಿಗೆ ಮೂಲಕ 942 ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಒಟ್ಟು 11,409 ಕೋಟಿ ರೂ.ತೆರಿಗೆ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ. 14.92ರಷ್ಟು ಸಾಧನೆಯಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಸ್ಟೇಟ್ ಜಿಎಸ್ಟಿ ಸಂಗ್ರಹದಲ್ಲಿಯೂ ದ್ವಿತೀಯ ಸ್ಥಾನದಲ್ಲಿದೆ. 2022ಕ್ಕೆ ಜಿಎಸ್‍ಟಿ ಪರಿಹಾರ ವ್ಯವಸ್ಥೆ ಅಂತ್ಯವಾಗಲಿದೆ. ಇದನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಅಬಕಾರಿ ಇಲಾಖೆ: ರಾಜ್ಯದಲ್ಲಿ 2021-22ನೆ ಸಾಲಿಗೆ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹ ಗುರಿ 24,580 ಕೋಟಿ ರೂ. ಗಳಾಗಿದ್ದು, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು 4,284.05 ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷ ಎಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. 2020-21ರಲ್ಲಿ 23,332.10 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಬೆಳವಣಿಗೆ ದರ ಶೇ.8.10ರಷ್ಟಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಕಾರ್ಯದರ್ಶಿಗಳಾದ ಏಕ್‍ರೂಪ್ ಕೌರ್ ಹಾಗೂ ಪಿ.ಸಿ.ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್, ಅಬಕಾರಿ ಇಲಾಖೆ ಆಯುಕ್ತ ಬಿ.ಲೋಕೇಶ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತೆರಿಗೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳು ವಿಶೇಷ ಆಸ್ಥೆ ವಹಿಸಬೇಕು. 2022ಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪರಿಹಾರ ವ್ಯವಸ್ಥೆ ಅಂತ್ಯವಾಗಲಿದೆ. ಇದನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡುವುದು

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News