ಸಿಎಂ ಬದಲಾವಣೆ ವಿಚಾರದಲ್ಲಿ ದೇವೇಗೌಡ ಕುಟುಂಬವನ್ನು ಎಳೆದು ತರಬೇಡಿ: ಕುಮಾರಸ್ವಾಮಿ

Update: 2021-06-14 14:55 GMT

ಮಂಡ್ಯ, ಜೂ.14: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ. ನಾವು ಯಾರ ಪರವಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾಲೂಕಿನ ಹನಕೆರೆ ಗ್ರಾಮದಲ್ಲಿ ಶಾಸಕ ಎಂ.ಶ್ರೀನಿವಾಸ್ ಅಭಿಮಾನಿಗಳ ಬಳಗದಿಂದ ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ದೇವೇಗೌಡರನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಹಲವಾರು ವರ್ಷಗಳಿಂದ ದುರ್ಬಳಕೆ ಮಾಡಿಕೊಂಡಿವೆ. ಕೊರೋನ ಸಂಕಷ್ಟ ಸಮಯವಲ್ಲಿ ರಾಜಕೀಯ ಮಾಡಬಾರದು ಎಂದು ಮೌನವಾಗಿದ್ದೇವೆ. ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಯಾರು ಮುಖ್ಯಮಂತ್ರಿಯಾಗಿ ಇರುತ್ತಾರೋ ಅದು ನಮಗೆ ಸಂಬಂಧವಿಲ್ಲದ ವಿಷಯವಾಗಿದೆ. ನಾಡಿನ ರಕ್ಷಣೆ ಮಾಡುವುದರ ಕಡೆ ಅಧಿಕಾರದಲ್ಲಿರುವವರು ಗಮನ ಕೊಡಬೇಕು. ಕೊರೋನಾವನ್ನು ನಿಯಂತ್ರಿಸಲು ಸರಕಾರ ಕ್ರಮ ವಹಿಸಬೇಕು. ಸೋಂಕು ಕಡಿಮೆ ಆಗುತ್ತದೆ ಎಂದು ಲಘುವಾಗಿ ಪರಿಗಣಿಸಬಾರದು ಎಂದು ಅವರು ಸಲಹೆ ನೀಡಿದರು.

ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟಕ್ಕೊಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರಕಾರ ರೈತರ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು

''ಖಜಾನೆ ತುಂಬಿಸಲು ಬೆಲೆ ಏರಿಕೆ''
ಸರಕಾರದ ಖಜಾನೆ ತುಂಬಿಸುವುದಕ್ಕೆ ಈ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡಿಸೇಲ್ ದರ ದಿನನಿತ್ಯ ಏರುತ್ತಲೇ ಇದೆ. ಕಾಂಗ್ರೆಸ್ ನಾಯಕರು ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ 32 ರೂ. ಇದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 68 ರೂ. ಸೆಸ್ ವಿಧಿಸುತ್ತಿದೆ. ಈ ಸೆಸ್ ಕಡಿತ ಮಾಡಬೇಕು ಎಂದು ಅವರು ಹೇಳಿದರು.

''ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ''
72 ಕೋಟಿ ರೂ. ಅವ್ಯಹಾರ ಕುರಿತು ನಾನು ಸಿಎಂ ಆಗಿದ್ದಾಗ ಮನ್‌ಮುಲ್ ಆಡಳಿತ ಮಂಡಳಿ ವಿರುದ್ಧ ತನಿಖೆಗೆ ಆದೇಶಿಸಿದ್ದೆ. ಆದರೆ, ಬಿಜೆಪಿ ಸರಕಾರ ಬಂದ ಬಳಿಕ ತನಿಖೆಗೆ ತಡೆ ಹಿಡಿದಿದ್ದಾರೆ. ಮನ್‌ಮುಲ್ ಮುಳುಗಿಸಿದವರ ರಕ್ಷಣೆಗೆ ಕೆಲವರು ನಿಂತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಹಾಲಿಗೆ ನೀರು ಮಿಕ್ಸ್ ಮಾಡುವ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂಬುದನ್ನು ಅಲ್ಲಿ ಕೆಲಸ ಮಾಡುವವರೇ ಹೇಳುತ್ತಿದ್ದಾರೆ. ಈಗ ಸತ್ಯಾಂಶ ಹೊರ ಬಿದ್ದಿದೆ. ಜನರ ದುಡ್ಡು ಲೂಟಿ ಮಾಡುವವರು ಯಾವುದೇ ಪಕ್ಷದವರಾದರೂ ಸರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News