ಜೂ.16ರಂದು ರಾಜ್ಯಕ್ಕೆ ಅರುಣ್ ಸಿಂಗ್ ಆಗಮನ: ಬಿಜೆಪಿಯಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

Update: 2021-06-14 16:06 GMT
ಅರುಣ್ ಸಿಂಗ್

ಬೆಂಗಳೂರು, ಜೂ. 14: `ನಾಯಕತ್ವ ಬದಲಾವಣೆ, ಶಾಸಕರ ಅಸಮಾಧಾನ ಶಮನ'ಕ್ಕಾಗಿ ಬುಧವಾರ(ಜೂ.16)ರ ಮಧ್ಯಾಹ್ನ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು, ಜೂ.16, 17 ಮತ್ತು 18ರಂದು ಮೂರು ದಿನಗಳ ಕಾಲ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ, ಸಚಿವರು, ಸಂಸದರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಅರುಣ್ ಸಿಂಗ್ ಆಗಮನ ಖಚಿತವಾಗುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪರ ಮತ್ತು ವಿರೋಧಿ ಬಣದ ಶಾಸಕರು ಚುರುಕುಗೊಂಡಿದ್ದು, ಗುಪ್ತ ಸಮಾಲೋಚನೆ ಮೂಲಕ ಶಾಸಕರು ತಮ್ಮ `ಬಲಪ್ರದರ್ಶನ'ಕ್ಕೆ ಸನ್ನದ್ದರಾಗುತ್ತಿದ್ದಾರೆ. ಈ ಮಧ್ಯೆ ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ತೆರಳಿದ್ದೇನೆಂದು ಸ್ಪಷ್ಟನೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ದಿಲ್ಲಿಯಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆಂಬ ಸುದ್ದಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಈಗಾಗಲೇ 'ಯಡಿಯೂರಪ್ಪನವರೇ ಮುಂದಿನ ಎರಡೂ ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಅದರ ಬೆನ್ನಲ್ಲೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂಬ ಒತ್ತಡ ಮತ್ತು ಒತ್ತಾಯಗಳು ಹಿರಿಯ ಹಾಗೂ ಪಕ್ಷ ನಿಷ್ಟ ಶಾಸಕರಿಂದಲೇ ಬಹಿರಂಗವಾಗಿ ಕೇಳಿಬರುತ್ತದೆ. ಹೀಗಾಗಿ ಅರುಣ್ ಸಿಂಗ್ ಸಭೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಬಿಎಸ್‍ವೈಗೆ ಬೆಂಬಲ: ಸಚಿವರು, ಶಾಸಕರ ಸಭೆಗೆ ಮೊದಲೇ ಹಲವು ಸಚಿವರು, ಶಾಸಕರು ಬಿ.ಎಸ್.ಯಡಿಯೂರಪ್ಪನವರಿಗೆ ನಮ್ಮ ಬೆಂಬಲ ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು, `ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡುವುದಿಲ್ಲ' ಎಂದು ಹೇಳುತ್ತಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ಕ್ಷೇತ್ರದ ಶಾಸಕ ಅರುಣ್ ಕುಮಾರ್, `ನಮ್ಮ ಬೆಂಬಲ ಯಡಿಯೂರಪ್ಪನವರಿಗೆ' ಎಂದು ಘೋಷಣೆ ಮಾಡಿದ್ದಾರೆ.

ನಾಯಕತ್ವ, ಸಿಎಂ ಬದಲಾವಣೆ ಇಲ್ಲ: `ನಾಯಕತ್ವ ಬದಲಾವಣೆಯ ಚರ್ಚೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೇರಿದಾಗಿನಿಂದಲೂ ಇದೆ. ಆದರೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆಯಾಗಲೀ ಮುಖ್ಯಮಂತ್ರಿಯ ಬದಲಾವಣೆಯಾಗಲೀ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಜೂ.16ಕ್ಕೆ ಉಸ್ತುವಾರಿಗಳು ಸಭೆ ಕರೆದಿದ್ದಾರಾದರೂ ಚರ್ಚೆಯ ವಿಷಯ ಗೊತ್ತಿಲ್ಲ. ಸಚಿವರ ಸಭೆಯೂ ನಡೆಯಲಿದ್ದು ಅದರಲ್ಲಿ ತಾನೂ ಭಾಗವಹಿಸುತ್ತಿದ್ದೇನೆ. ಇನ್ನೂ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದು, ಇದನ್ನೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಅದಕ್ಕೆ ಬದ್ಧರಾಗಬೇಕು ಎಂದು ಪಾಟೀಲ್ ಹೇಳಿದರು.

ನಗರದಲ್ಲೇ ಮೂರು ದಿನ ಅರುಣ್ ಸಿಂಗ್ ವಾಸ್ತವ್ಯ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಗಳೂ ಆಗಿರುವ ಅರುಣ್ ಸಿಂಗ್ ಅವರು ಜೂ.16ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿರುವ ಅರುಣ್ ಸಿಂಗ್, ಸಿಎಂ, ರಾಜ್ಯಾಧ್ಯಕ್ಷರು, ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ.

ಜೂ.16ರ ಮಧ್ಯಾಹ್ನ 3.30ಕ್ಕೆ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಜೆ 4.20ಕ್ಕೆ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಲಿದ್ದು, ಸಂಜೆ 4:45ಕ್ಕೆ ರಾಜ್ಯ ಬಿಜೆಪಿ ಕಾರ್ಯಾಲಯ `ಜಗನ್ನಾಥ ಭವನ'ಕ್ಕೆ ತೆರಳಲಿದ್ದು, ಸಂಜೆ 5 ಗಂಟೆಯ ಸುಮಾರಿಗೆ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ರಾತ್ರಿ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೂ.17 ಮತ್ತು 18ರಂದು ಅರುಣ್ ಸಿಂಗ್ ಸರಣಿ ಸಭೆಗಳು ನಡೆಸಲಿದ್ದಾರೆ. ಜೂ.18ರ ಸಂಜೆ 5ಕ್ಕೆ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಿದ್ದು, ಜೂ.18ರ ಸಂಜೆ 7ರ ಬಳಿಕ ಅರುಣ್ ಸಿಂಗ್ ಹೊಸದಿಲ್ಲಿಗೆ ಹಿಂದಿರುಗಲಿದ್ದಾರೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News