ಸಾ.ರಾ.ಕಲ್ಯಾಣ ಮಂಟಪ ವಿವಾದ: ಅಧಿಕಾರಿಗಳು ನನಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ; ಸಾ.ರಾ.ಮಹೇಶ್

Update: 2021-06-14 16:33 GMT

ಮೈಸೂರು,ಜೂ.14: ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ. ಮೈಸೂರಿನಲ್ಲಿ ರಾಜಕಾಲುವೆಯೇ ಇಲ್ಲ ಎಂದು ಎಡಿಸಿ ಮಂಜುನಾಥಸ್ವಾಮಿ ನೇತೃತ್ವದ ತನಿಖಾ ಆಯೋಗ ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಿಗೆ ವರದಿ ಸಲ್ಲಿಸಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ವರದಿ ಬಂದ ಹಿನ್ನಲೆಯಲ್ಲಿ ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಳೆಯ ದಿನಾಂಕ ಹಾಕಿ ನನ್ನ ಒಡೆತನದ ಸಾ.ರಾ.ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಆರೋಪ ಮಾಡಿ ಜನರಿಗೆ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದರು. ಇದನ್ನು ತನಿಖೆ ನಡೆಸಿದ ಅಧಿಕಾರಿಗಳು ನನಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ದಿಶಾ ಆಪ್ ಮೂಲಕ ತಪ್ಪು ಮಾಹಿತಿ ನೀಡಿ ನೀಚ ಕೆಲಸವನ್ನು ಹಿಂದಿನ ಜಿಲ್ಲಾಧಿಕಾರಿಗಳು ಮಾಡಿದ್ದಾರೆ. ಮೈಸೂರಿನಲ್ಲಿ ರಾಜಕಾಲುವೆಯೇ ಇಲ್ಲ, ಇರುವುದು ನೀರು ಹರಿಯುವ ಹಳ್ಳಗಳು. ಆದರೆ ಇವರು ಕೆಲವು ಅಧಿಕಾರಿಗಳನ್ನು ಬಳಸಿಕೊಂಡು ಮ್ಯಾಪ್ ಅನ್ನೇ ತಿದ್ದಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರಿಯನ್ನು ಮನೆಗೆ ಕರೆಸಿಕೊಂಡು ಮುಡಾ ಆಯುಕ್ತರಿಗೆ ಹಳೆಯ ದಿನಾಂಕ ಹಾಕಿ ಪತ್ರ ಬರೆಯುತ್ತಾರೆ. ಜೂ.6 ರಂದು ಇವರು ವರ್ಗಾವಣೆಯಾಗುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕಾದರೆ ಟಪಾಲಿನಲ್ಲಿ ನಮೂದಾಗಿರಬೇಕು. ಆದರೆ ಅದ್ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ತಿಳಿಸಿದರು.

ನಾನು ಸರ್ವೆ ನಂ 10/8 ರಲ್ಲಿ 30 ವರ್ಷಗಳ ಹಿಂದೆ ಎಕರೆಗೆ 90 ಸಾವಿರ ರೂ. ಗೆ ಖರೀದಿ ಮಾಡಿದ್ದೆ. ಅವರು ಎರಡು ಎಕರೆ ಅಕ್ರಮ ಎಂದು ಹೇಳಿದ್ದಾರೆ. ನಾನು ಅಲ್ಲಿ ಖರೀದಿ ಮಾಡಿದ್ದು 4 ಎಕರೆ. ಈ ಬಗ್ಗೆ ಅವರಿಗೇ ಸರಿಯಾದ ಮಾಹಿತಿ ಇಲ್ಲ ಎಂದು ಕಿಡಿಕಾರಿದರು.

ನಾನು ಅವರ ಕರ್ತವ್ಯ ಲೋಪ ಮತ್ತು ಕಾನೂನು ಲೋಪಗಳ ಬಗ್ಗೆ ಪ್ರಶ್ನೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂದು ತನಿಖೆಗೆ ಒತ್ತಾಯಿಸಿದ್ದೆ. ತನಿಖಾ ವರದಿಯಲ್ಲಿ ನನ್ನ ಪರ ವರದಿ ಬಂದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೋನದಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೇ ಒಂದು ತಿಂಗಳಲ್ಲಿಯೇ ಸರ್ಕಾರಿ ಅಂಕಿ ಅಂಶ ಪ್ರಕಾರ ಮೈಸೂರು ನಗರದಲ್ಲಿ 969 ಮಂದಿ ಕೋರೋನಗೆ ಬಲಿಯಾಗಿದ್ದಾರೆ. ಆದರೆ ಅವರು 238 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವರದಿ ನೀಡಿದ್ದಾರೆ. ಇವರ ಕರ್ತವ್ಯ ಲೋಪದ ಬಗ್ಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಸರ್ಕಾರ ಈತ ಸತ್ತ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ. ಇವರು ನೀಡಿರುವ ಸುಳ್ಳು ವರದಿಯಿಂದ ಅಮಾಯಕರು ವಂಚನೆಗೊಳಗಾಗಿದ್ದಾರೆ ಎಂದು ಹೇಳಿದರು.

ಅವರ ಬಗ್ಗೆ ನನಗೆ ಅಸಹ್ಯ ಆಗುತ್ತಿದೆ. ಇವರು ಏನು ಓದಿದ್ದಾರೋ ಗೊತ್ತಿಲ್ಲ. ಇವರು ಯಾವ ಐಎಎಸ್ ಓದಿದ್ದಾರೊ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇವರ ಕರ್ತವ್ಯ ಲೋಪವನ್ನು ಮುಚ್ಚಿಕೊಳ್ಳಲು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದರ ಸಂಪೂರ್ಣ ತನಿಖೆ ಮಾಡಿದ ಅಧಿಕಾರಿಗಳು ಸಾ.ರಾ.ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ ಎಂದು ವರದಿ ನೀಡಿದ್ದಾರೆ ಎಂದರು.

ಇಂತಹ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಯನ್ನು ಅದೇನೋ ಕಮ್ ಬ್ಯಾಕ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇವರನ್ನು ವರ್ಗಾವಣೆ ಮಾಡಬಾರದಿತ್ತು, ಅಮಾನತುಗೊಳಿಸಬೇಕಿತ್ತು ಎಂದು ಹೇಳಿದರು.

ಸಾ.ರಾ.ಕಲ್ಯಾಣ ಮಂಟಪ ಹಳ್ಳದ ಮೇಲೆ ನಿರ್ಮಾಣವಾಗಿಲ್ಲ. ಹಳ್ಳದ ಯಾವುದೇ ಜಾಗ ಒತ್ತುವರಿ ಮಾಡಿಕೊಂಡಿಲ್ಲ. ಎಲ್ಲಾ ಕಡೆ 70 ರಿಂದ 74 ಮೀಟರ್ ಅಂತರವಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ವರದಿಯನ್ನು ಓದಿ ಶಾಸಕ ಸಾ.ರಾ.ಮಹೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News