ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ ಆರೋಗ್ಯ ಮತ್ತು ಉದ್ಯೋಗ ವಿಚಾರದಲ್ಲಿ ಹಿನ್ನಡೆ?

Update: 2021-06-14 19:30 GMT

ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕವನ್ನು ಇತ್ತೀಚೆಗೆ ನೀತಿ ಆಯೋಗ ಬಿಡುಗಡೆ ಮಾಡಿದ್ದು ದೇಶದ ಪ್ರಗತಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ಕಂಡುಬರುತ್ತಿದೆ. ವಿಶ್ವಸಂಸ್ಥೆಯ ಗುರಿಯನ್ನು ತಲುಪುವುದರಲ್ಲಿ ಭಾರತವು ಬಹಳಷ್ಟು ದೂರ ಸಾಗಬೇಕಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. 2030ರ ಒಳಗೆ ದೇಶವು ನಿಗದಿತ ಅಭಿವೃದ್ಧಿ ಗುರಿಯನ್ನು ತಲುಪುವುದು ಸ್ವಲ್ಪಅನುಮಾನವೇ ಎನ್ನುತ್ತಾರೆ ತಜ್ಞರು. ಏಕೆಂದರೆ ಈಗ ಬಿಡುಗಡೆಯಾಗಿರುವ ಸುಸ್ಥಿರ ಅಭಿವೃದ್ಧಿ ಸೂಚ್ಯಂಕವನ್ನು ಗಮನಿಸಿದರೆ ಮುಂದಿನ ಎಂಟು ವರ್ಷದಲ್ಲಿ ಎಲ್ಲವನ್ನು ಸರಿಮಾಡಲು ಸಾಧ್ಯವಾಗುವುದು ಅನುಮಾನ ಎನ್ನುವ ಪ್ರಶ್ನೆ ಈಗ ಮೂಡಲಾರಂಭಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳು ದೇಶದ ಪ್ರಗತಿಯನ್ನು ರಾಷ್ಟ್ರೀಯ ಮತ್ತು ಉಪ-ರಾಷ್ಟ್ರಮಟ್ಟದಲ್ಲಿ ಅಳೆಯುತ್ತವೆ ಮತ್ತು ಸುಸ್ಥಿರತೆ, ಸ್ಥಿತಿಸ್ಥಾಪಕತ್ವ ಹಾಗೂ ಸಹಭಾಗಿತ್ವದ ವಿಚಾರದಲ್ಲಿ ದೇಶವು ಎತ್ತ ಸಾಗುತ್ತಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ನೀತಿ ಆಯೋಗದ ಪ್ರಸ್ತುತ ವರದಿಯ ಪ್ರಕಾರ ಕೇರಳ ರಾಜ್ಯವು ಇಡೀ ದೇಶದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಮುನ್ನಡೆಯಲ್ಲಿದೆ ಮತ್ತು ಕೇರಳ ಮಾದರಿಯ ಅಭಿವೃದ್ಧಿ ಮತ್ತೊಮ್ಮೆ ದೇಶದಲ್ಲಿ ಸುದ್ದಿ ಮಾಡುತ್ತಿದೆ. ತಮಿಳುನಾಡು ಮತ್ತು ಹಿಮಾಚಲ ಪ್ರದೇಶವು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕರ್ನಾಟಕ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ರಾಜಸ್ಥಾನ (60), ಉತ್ತರ ಪ್ರದೇಶ (60), ಅಸ್ಸಾಂ (57), ಜಾಖರ್ಂಡ್ (56) ಮತ್ತು ಬಿಹಾರ (52) ಸೂಚ್ಯಂಕದ ಕೊನೆಯ ಸ್ಥಾನದಲ್ಲಿವೆ.

ಬಡತನ ನಿವಾರಣೆಯಲ್ಲಿ ತಮಿಳುನಾಡು ರಾಜ್ಯವು ದೇಶದಲ್ಲಿ ಮುಂದಿದ್ದರೆ, ಹಸಿವು ನೀಗಿಸುವ ವಿಚಾರದಲ್ಲಿ ಕೇರಳ ರಾಜ್ಯ ಮಾದರಿಯಾಗಿದೆ. ಸುಸ್ಥಿರ ಅಭಿವೃದ್ಧಿ ವಿಚಾರದಲ್ಲಿ ಪಂಜಾಬ್ ರಾಜ್ಯವು ಮುಂದೆ ಇದ್ದರೆ, ಪರಿಸರ ವಿಚಾರದಲ್ಲಿ ಒಡಿಶಾ ರಾಜ್ಯವು ಮುಂದೆ ಇದೆ. ಅಸಮಾನತೆ ನಿವಾರಣೆ ವಿಚಾರದಲ್ಲಿ ಮೇಘಾಲಯವು ದೇಶಕ್ಕೆ ಮಾದರಿಯಾಗಿದೆ. ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಚಾರದಲ್ಲಿ ಗೋವಾ ಮುಂದೆ ಇದ್ದರೆ ಆರ್ಥಿಕ ಪ್ರಗತಿಯಲ್ಲಿ ಹಿಮಾಚಲಪ್ರದೇಶ ರಾಜ್ಯವು ಮುಂದೆ ಇದೆ ಎನ್ನುತ್ತದೆ ವರದಿ. ಆರೋಗ್ಯ ಕ್ಷೇತ್ರದಲ್ಲಿ ದೇಶವು ಬಹಳಷ್ಟು ಮುಂದೆ ಸಾಗಬೇಕಾಗಿರುವ ಗಂಭೀರ ಅಂಶವನ್ನು ವರದಿಯು ಮನಗಂಡಿದೆ. ದೇಶದಲ್ಲಿ ಜನಸಂಖ್ಯೆ ಮತ್ತು ವೈದ್ಯರ ಅನುಪಾತ ಕುಸಿಯುತ್ತಿರುವುದು ಕೊರೋನದ ಸಂಕಷ್ಟದ ಕಾಲದಲ್ಲಿ ಯೋಚಿಸುವಂತೆ ಮಾಡಿದೆ.

ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಮುಂದೆ ಸಾಗಬೇಕಾಗಿರುವ ಅಂಶವನ್ನು ವರದಿ ಎತ್ತಿತೋರಿಸಿದೆ. ಈ ವಿಚಾರದಲ್ಲಿ ಕೇರಳ ರಾಜ್ಯವು ಸ್ವಲ್ಪಮಟ್ಟಿಗೆ ಇತರ ರಾಜ್ಯಗಳಿಗಿಂತ ಮುಂದೆ ಇದೆ. ಆದರೂ ಅಲ್ಲಿ ಸಹ ವೈದ್ಯಕೀಯ ಲಭ್ಯತೆಗಳ ವಿಚಾರದಲ್ಲಿ ಸಾಕಷ್ಟು ಏರಿಳಿತಗಳನ್ನು ವರದಿ ಗಮನಿಸಿದೆ. ಈ ಬಾರಿ ವೈದ್ಯಕೀಯ ಸೌಲಭ್ಯಗಳ ವಿಚಾರದಲ್ಲಿ ಆಂಧ್ರಪ್ರದೇಶವು ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಆದರೆ ಕರ್ನಾಟಕ ಕಳೆದ ಬಾರಿಗಿಂತ ಎರಡು ಅಂಕ ಕೆಳಗೆ ಕುಸಿದಿದೆ. ಭಾರತದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಲಭ್ಯತೆಯ ವಿಚಾರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಸ್ವಲ್ಪ ಕುಸಿತ ಕಂಡಿರುವುದು ಕಂಡುಬರುತ್ತಿದೆ. ಶಾಲೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸೌಕರ್ಯ ಒದಗಿಸುವ ವಿಚಾರದಲ್ಲೂ ಸಹ ದೇಶವು ಹಿಂದುಳಿದಿರುವುದು ಕಂಡುಬರುತ್ತಿದೆ. ಕುಡಿಯುವ ನೀರಿನ ವಿಚಾರದಲ್ಲಿ ಕೆಲವೇ ಕೆಲವು ರಾಜ್ಯಗಳು ಮಾತ್ರ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುತ್ತಿರುವುದು ಕಂಡುಬಂದಿದ್ದು ಮುಖ್ಯವಾಗಿ ಕೊಳಚೆ ನೀರು ಸಂಸ್ಕರಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕೈಗಾರಿಕೆಗಳ ಪ್ರಮಾಣ ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ದೇಶದಲ್ಲಿ ಕುಸಿದಿರುವ ಕುರಿತು ತಜ್ಞರು ಗಂಭೀರವಾಗಿ ಯೋಚಿಸಬೇಕಾಗಿದೆ. ಮುಂದೆ ಕೈಗಾರಿಕೆಗಳಿಗೆ ಹೊಸ ನಿಯಮಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ.

ತಾಯಿ ಮತ್ತು ಮಕ್ಕಳ ಆರೋಗ್ಯ ವಿಚಾರದಲ್ಲಿ ಅಲ್ಪಪ್ರಗತಿ ಕಂಡಿದ್ದರೂ ಬಾಣಂತಿಯರ ಮತ್ತು ಶಿಶುಗಳ ಸಾವಿನ ಪ್ರಮಾಣ ವಿಚಾರದಲ್ಲಿ ದೇಶವು ಮತ್ತಷ್ಟು ಮುಂದೆ ಸಾಗಬೇಕಾದ ಅವಶ್ಯಕತೆಯನ್ನು ವರದಿ ತೋರಿಸಿದೆ. ಈ ವಿಚಾರದಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳು ಸಾಕಷ್ಟು ಪ್ರಗತಿಯನ್ನು ಕಂಡಿವೆ. ಉಳಿದ ರಾಜ್ಯಗಳು ಗುರಿಗಳಿಗಿಂತ ಬಹಳ ದೂರ ಇವೆ. ಐದು ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣವನ್ನು ತಗ್ಗಿಸುವ ವಿಚಾರದಲ್ಲಿ ದೇಶವು ಇನ್ನೂ ಸಾಕಷ್ಟು ದೂರ ಸಾಗಬೇಕಾಗಿದೆ ಎನ್ನುವುದನ್ನು ಈ ವರದಿ ಕಂಡುಕೊಂಡಿದೆ. ಲಿಂಗಾನುಪಾತ ವಿಚಾರದಲ್ಲಿ ದೇಶವು ಇನ್ನು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯನ್ನು ಈ ವರದಿ ಗಮನಿಸಿದೆ. ಏಕೆಂದರೆ ಈ ಬಾರಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದ ವಿಚಾರದಲ್ಲಿ ಸ್ವಲ್ಪಮಟ್ಟಿನ ಕುಸಿತವನ್ನು ಗಮನಿಸಲಾಗಿದೆ (ಕಳೆದ ಬಾರಿ 929, ಈ ಬಾರಿ 924).

ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಅನುಪಾತ ಏರಿಕೆಯಾಗಿದೆ. ಆದರೆ ಕರ್ನಾಟಕದಲ್ಲಿ ಅನುಪಾತ ಸ್ವಲ್ಪಕಡಿಮೆಯಾಗಿದೆ. ದೇಶದಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೂ ಸಾರ್ವತ್ರಿಕ ಲಸಿಕೆ ನೀಡುವ ವಿಚಾರದಲ್ಲಿ ದೇಶವು ಇನ್ನಷ್ಟು ಮುಂದೆ ಸಾಗಬೇಕಾಗಿದೆ. ಅದರಲ್ಲೂ ನಾಗಲ್ಯಾಂಡ್ ಮತ್ತು ಪುದುಚೇರಿ ರಾಜ್ಯಗಳು ವಿಶೇಷ ಗಮನ ನೀಡಬೇಕಾಗಿದೆ. ದೇಶದಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಇತರ ಸಾಂಕ್ರಾಮಿಕ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಶುದ್ಧ ನೀರು ಮತ್ತು ನೈರ್ಮಲ್ಯ ವಲಯದಲ್ಲಿ ಪ್ರಮುಖ ಸರಕಾರದ ಯೋಜನೆಗಳ ಹೊರತಾಗಿಯೂ ಈ ಬಾರಿ ಐದು ಅಂಶಗಳ ಕುಸಿತ ಕಂಡಿದೆ. ಗ್ರಾಮೀಣ ಜನರಿಗೆ ಶುದ್ಧ ನೀರಿನ ಲಭ್ಯತೆಯನ್ನುಮತ್ತಷ್ಟು ದೊರೆಯುವಂತೆ ಮಾಡಲು ಹೊಸ ಕಾರ್ಯಕ್ರಮ ಅಗತ್ಯವಿದೆ. ದೇಶದಲ್ಲಿ ವೈದ್ಯಕೀಯ ಮೂಲಭೂತ ಸೌಕರ್ಯಗಳ ಬೆಳವಣಿಗೆಗೆ ಗಮನ ನೀಡಬೇಕಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳನ್ನು ತಂತ್ರಜ್ಞಾನ ಆಧಾರಿತ ಮೇಲ್ದರ್ಜೆಗೇರಿಸಲು ವರದಿ ಸಲಹೆ ನೀಡಿದೆ. ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡಲು ಸಲಹೆ ನೀಡಿದೆ.

ಉದ್ಯೋಗ, ವೇತನ ಮತ್ತು ಕೈಗಾರಿಕಾ ಬೆಳವಣಿಗೆ ವಿಚಾರದಲ್ಲಿ ಕಳೆದ ವರ್ಷಕ್ಕಿಂತ ಭಾರತದ ಆರ್ಥಿಕತೆಯು ಈ ಬಾರಿ ಹೊಡೆತವನ್ನು ಕಂಡಿದೆ. ಕೈಗಾರಿಕೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಸ್‌ಡಿಜಿಯಲ್ಲಿ ದೇಶದ ಸ್ಕೋರ್ ಕಳೆದ ಬಾರಿಗಿಂತ 10 ಅಂಕಗಳು ಕೆಳಗೆ ಜಾರಿದೆ. ಇದಕ್ಕೆ ಕೊರೋನ ಪರಿಣಾಮ ಸಹ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು. ದೇಶದ ನಾಗರಿಕರಿಗೆ ಯೋಗ್ಯವಾದ ಕೆಲಸ ಲಭ್ಯವಿರುವ ವಿಚಾರದಲ್ಲಿ ಕಳೆದ ಬಾರಿಗಿಂತ 3 ಅಂಕಗಳು ಈ ಬಾರಿ ಕುಸಿತ ಕಂಡಿದೆ. ದೇಶದ ಜಿಡಿಪಿ ಪ್ರಮಾಣವೂ ಸಹ ಅಂದುಕೊಂಡಷ್ಟು ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ವಿಶ್ವಬ್ಯಾಂಕಿನ ವರದಿಯ ಪ್ರಕಾರ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ದೇಶವು ಸಾಕಷ್ಟು ಸಾಧಿಸಬೇಕಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ಸುಲಭವಾಗಿ ನಡೆಸುವ ವ್ಯಾಪಾರ ವಹಿವಾಟಿನ ನಿಯಮಾವಳಿಗಳ ಜಾರಿಯಲ್ಲಿ ದೇಶವು ಸಾಕಷ್ಟು ಸುಧಾರಿಸಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಉದ್ಯೋಗ ಸೃಷ್ಟಿ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವುದು ಈ ವರದಿಯಲ್ಲಿ ಕಂಡುಬರುತ್ತಿದೆ.

ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ. 12.39ರಿಂದ 11.74ಕ್ಕೆ ಕುಸಿದಿದೆ. 2030ರ ವೇಳೆಗೆ ಉತ್ಪಾದನಾ ವಲಯ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಸಾಧನ ಅಂದರೆ ಶೇ. 20ರಷ್ಟು ಸೃಷ್ಟಿಸಬಹುದೆಂದು ದೃಢವಾಗಿ ನಂಬಲಾಗಿತ್ತು. ಆದರೂ ಭಾರತದಲ್ಲಿ ಉತ್ಪಾದನಾ ವಲಯ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಹಿನ್ನೆಡೆ ಕಂಡಿರುವುದು ವರದಿಯಲ್ಲಿ ಕಂಡುಬಂದಿದೆ. ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದರೂ ಅಂದುಕೊಂಡಷ್ಟು ಮಟ್ಟಿಗೆ ಉದ್ಯೋಗ ಸೃಷ್ಟಿಯಾಗದಿರುವುದು ನಿಜಕ್ಕೂ ಸೋಜಿಗ. ಕಂಪೆನಿಗಳು ಹೂಡಿಕೆ ಮಾಡಿದರೂ ಅದು ತಳ ಮಟ್ಟವನ್ನು ಇನ್ನೂ ಸರಿಯಾಗಿ ತಲುಪದಿರುವುದು ಯೋಚಿಸುವಂತೆ ಮಾಡಿದೆ. ಭಾರತೀಯ ಕೈಗಾರಿಕೆಗಳು ಮತ್ತು ಕಂಪೆನಿಗಳು ಹೊಸ ರೀತಿಯ ಅನ್ವೇಷಣೆಯಲ್ಲಿ ವೈಫಲ್ಯ ಹೊಂದಿರುವುದನ್ನು ವರದಿ ಗಮನಿಸಿದೆ. ಇನ್ನೂ ಭಾರತೀಯ ಕೈಗಾರಿಕೆಗಳು ಕಚ್ಚಾ ಪದಾರ್ಥಗಳಿಗೆ ವಿದೇಶಗಳನ್ನು ಅವಲಂಬಿಸಿರುವುದು ಗಮನಿಸಬೇಕಾದ ವಿಚಾರವಾಗಿದೆ.

ದೇಶದ ಕೆಲವೇ ಕೆಲವು ರಾಜ್ಯಗಳು ಹೆಚ್ಚಿನ ಹೂಡಿಕೆಯನ್ನು ಪಡೆಯುತ್ತಿರುವುದನ್ನು ಇಲ್ಲಿ ವರದಿ ವಿಶೇಷವಾಗಿ ಗಮನಿಸಿದೆ. ಇದು ಪ್ರಾದೇಶಿಕ ಅಸಮಾನತೆ ಮುಂದುವರಿಯಲು ಕಾರಣವಾಗುತ್ತಿದೆ. ಉದ್ಯೋಗ ವಿಚಾರದಲ್ಲಿ ಸಹ ಜಾತಿಯಾಧಾರಿತ ಮತ್ತು ರಾಜಕೀಯ ಸಿದ್ಧಾಂತಗಳ ವಿಚಾರಗಳು ಪ್ರಭಾವ ಬೀರುವುದನ್ನು ವರದಿಯು ಸೂಕ್ಷ್ಮವಾಗಿ ಗಮನಿಸಿದೆ. ಈ ವರದಿ ಪ್ರಕಾರ ಕೃಷಿಯೇತರ ಜನರಲ್ಲಿ ಶೇ. 52ರಷ್ಟು ಮಂದಿಗೆ ಇದುವರೆಗೂ ಯಾವುದೇ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ತಲುಪಿಲ!್ಲ. ಈ ವಿಚಾರದಲ್ಲಿ ಬಹುತೇಕ ಎಲ್ಲಾ ರಾಜ್ಯಗಳು ಹಿಂದೆ ಬಿದ್ದಿವೆ. ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದರಿಂದ ನೇರವಾಗಿ ಅಸಮಾನತೆಗೆ ಕಾರಣವಾಗಿದೆ ಎನ್ನಬಹುದು. ಅಸಮಾನತೆ ವಿಚಾರದಲ್ಲಿ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಒಂದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿವೆ. ಆದರೆ ಕೇರಳವು ಒಂದು ರೀತಿಯ ಆಶಾಭಾವನೆಯನ್ನು ತೋರಿಸಿದರೆ, ಬಿಹಾರ ರಾಜ್ಯವು ಸಂಪತ್ತಿನ ಸೂಚ್ಯಂಕ ವಿಚಾರದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯದ ಪ್ರಮಾಣ ಪ್ರತಿವರ್ಷ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯೂ ಅದೇ ರೀತಿ ಹಿನ್ನಡೆಯನ್ನು ಕಂಡಿದೆ. ಗ್ರಾಮೀಣ ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡದಿರುವುದು ವರದಿಯಲ್ಲಿ ಕಂಡುಬಂದಿದೆ. ಸ್ಥಳೀಯ ಕೈಗಾರಿಕೆಗಳಿಗೆ ಗಮನ ನೀಡಿದರೆ ಉದ್ಯೋಗಕ್ಕಾಗಿ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ನರೇಗಾ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ಬಡತನ ಮತ್ತು ಹಸಿವಿನ ನಿರ್ಮೂಲನೆಯಲ್ಲಿ ಅಲ್ಪಮಟ್ಟಿಗೆ ಪ್ರಗತಿಯನ್ನು ಸಾಧಿಸಿದ್ದರೂ ದೇಶದ ಒಟ್ಟು ಜನಸಂಖ್ಯೆ ಮತ್ತು ಬೆಳವಣಿಗೆ ಗಮನಿಸಿದರೆ ವಿಶೇಷವಾಗಿ ಅಂಚಿನ ಜನರ ಒಳಗೊಳ್ಳುವಿಕೆಯ ಬೆಳವಣಿಗೆ ಆರೋಗ್ಯ, ಶಿಕ್ಷಣ ಮತ್ತು ಬಡತನ ನಿವಾರಣೆ ವಿಚಾರದಲ್ಲಿ ಸರಕಾರ ಸಾಕಷ್ಟು ಹೂಡಿಕೆಯನ್ನು ಮಾಡಬೇಕಾಗಿದೆ. 2030ರ ವೇಳೆಗೆ ಎಲ್ಲಾ ಗುರಿಗಳನ್ನು ಸಾಧಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಕೆಲವು ಕ್ಷೇತ್ರಗಳಲ್ಲಿ ನಿರ್ದೇಶಿತ ಗುರಿಗಳನ್ನು ತಲುಪುವ ಯತ್ನವನ್ನು ದೇಶವನ್ನು ಆಳುತ್ತಿರುವವರು ತ್ವರಿತವಾಗಿ ಮತ್ತು ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ.

Writer - ಡಾ. ಡಿ. ಸಿ ನಂಜುಂಡ

contributor

Editor - ಡಾ. ಡಿ. ಸಿ ನಂಜುಂಡ

contributor

Similar News