ಬಸ್‍ ಸಂಚಾರ ಆರಂಭವಾಗುವವರೆಗೆ ಶಿಕ್ಷಕಿಯರು ಮನೆಯಿಂದಲೇ ಕರ್ತವ್ಯ ನಿರ್ವಹಣೆ: ಸುರೇಶ್‍ ಕುಮಾರ್

Update: 2021-06-15 17:35 GMT

ಬೆಂಗಳೂರು, ಜೂ.15: ಲಾಕ್‍ಡೌನ್ ತೆರವುಗೊಂಡು ಬಸ್ ಸಂಚಾರ ಆರಂಭವಾಗುವವರೆಗೆ ಶಿಕ್ಷಕಿಯರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಆದೇಶಿಸಿದ್ದಾರೆ.

ಮಂಗಳವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿದಿದೆ. ಹಾಗೂ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಪ್ರಾರಂಭವಾಗಿಲ್ಲ. ಹೀಗಾಗಿ ಶಿಕ್ಷಕಿಯರು ಜೂ.21ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದ್ದಾರೆ.

ಜು.1 ರಿಂದ ಶಾಲೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೆ ಶಿಕ್ಷಕ ವೃಂದಕ್ಕೆ ಪರಿಷ್ಕೃತ ವೇಳಾಪಟ್ಟಿ ನೀಡಲಾಗಿತ್ತು. ಅದರಂತೆ ಶಿಕ್ಷಕರು ಜೂ.15 ರಿಂದಲೇ ಶಾಲೆಗಳಿಗೆ ಹಾಜರಾಗಿ ಸಕಲ ಸಿದ್ಧತೆಯಲ್ಲಿ ತೊಡಗಿಕೊಳ್ಳಲು ಆದೇಶಿಸಲಾಗಿತ್ತು. ಆದರೆ, ಶಿಕ್ಷಕಿಯರ ಸಮಸ್ಯೆಯನ್ನು ಪರಿಗಣಿಸಿ, ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನು ಹೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು ಜೂ.21, 2021 ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜೂ.14ರಂದು ಹೊರಡಿಸಿರುವ ಆದೇಶಕ್ಕೆ ತಿದ್ದುಪಡಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡನೇ ಪಿಯುಸಿ ವಿಚಾರ ಕುರಿತು ಇಂದು(ಮಂಗಳವಾರ) ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಆದೇಶವನ್ನು ಅಧ್ಯಯನ ಮಾಡಿ ಅಗತ್ಯ ಪರಾಮರ್ಶೆ ನಡೆಸಿ ತನ್ನ ನಿಲುವನ್ನು ಕೋರ್ಟ್‍ಗೆ ತಿಳಿಸುತ್ತದೆ.

-ಸುರೇಶ್‍ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News