ದಕ್ಷಿಣ ಚೀನಾ ಸಮುದ್ರ ಪ್ರವೇಶಿಸಿದ ಅಮೆರಿಕದ ವಿಮಾನವಾಹಕ ಯುದ್ಧನೌಕೆಗಳು

Update: 2021-06-15 17:50 GMT

ವಾಶಿಂಗ್ಟನ್, ಜೂ. 15: ಯುಎಸ್ಎಸ್ ರೊನಾಲ್ಡ್ ರೇಗನ್ ಯುದ್ಧನೌಕೆಯ ನೇತೃತ್ವದಲ್ಲಿ ಅಮೆರಿಕದ ವಿಮಾನವಾಹಕ ಯುದ್ಧನೌಕೆಗಳ ಗುಂಪೊಂದು ನಿಯಮಿತ ಕಾರ್ಯಕ್ರಮದ ಭಾಗವಾಗಿ ದಕ್ಷಿಣ ಚೀನಾ ಸಮುದ್ರವನ್ನು ಪ್ರವೇಸಿಸಿದೆ ಎಂದು ಅಮೆರಿಕದ ನೌಕಾಪಡೆ ತಿಳಿಸಿದೆ.

ಅಮೆರಿಕ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲೇ ಈ ಬೆಲವಣಿಗೆ ಸಂಭವಿಸಿದೆ. ಇಡೀ ದಕ್ಷಿಣ ಚೀನಾ ಸಮುದ್ರ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆ.

ಯುಎಸ್ಎಸ್ ರೊನಾಲ್ಡ್ ರೇಗನ್ ಜೊತೆಗೆ ಗೈಡಡ್-ಮಿಸೈಲ್ ಕ್ರೂಸರ್ ಯುಎಸ್ಎಸ್ ಶಿಲೋಹ್ ಮತ್ತು ಗೈಡಡ್ ಮಿಸೈಲ್ ಡೆಸ್ಟ್ರಾಯರ್ ಯುಎಸ್ಎಸ್ ಹ್ಯಾಲ್ಸಿ ಕೂಡ ದಕ್ಷಿಣ ಚೀನಾ ಸಮುದ್ರವನ್ನು ಪ್ರವೇಶಿಸಿವೆ ಎಂದು ಅಮೆರಿಕದ ನೌಕಾಪಡೆ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕದ ಯುದ್ಧನೌಕೆಗಳು ಪ್ರವೇಶಿಸುವುದನ್ನು ಚೀನಾ ಪದೇ ಪದೇ ವಿರೋಧಿಸುತ್ತಿದೆ. ಅಮೆರಿಕದ ಈ ಕ್ರಮವು ಶಾಂತಿ ಮತ್ತು ಸ್ಥರತೆಯನ್ನು ಎತ್ತಿಹಿಡಿಯುವುದಕ್ಕೆ ಪೂರಕವಾಗಿಲ್ಲ ಎಂದು ಅದು ಹೇಳುತ್ತಿದೆ.

‘‘ದಕ್ಷಿಣ ಚೀನಾ ಸಮುದ್ರದಲ್ಲಿರುವ ವೇಳೆ ಯುದ್ಧನೌಕೆಗಳು ಸಮುದ್ರ ಭದ್ರತಾ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಹಿಂದೂಮಹಾಸಾಗರ-ಪೆಸಿಫಿಕ್ನಲ್ಲಿ ಅಮೆರಿಕ ನೌಕಾಪಡೆಯ ನಿಯಮಿತ ಉಪಸ್ಥಿತಿಯ ಭಾಗವಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ವಿಮಾನವಾಹಕ ನೌಕೆಗಳ ತಾಲೀಮು ನಡೆಯುತ್ತಿದೆ’’ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.

ಇತ್ತೀಚನ ವರ್ಷಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಚೀನಾ ಹೆಚ್ಚಿಸಿದೆ. ಚೀನಾವು ಅಲ್ಲಿ ಕೃತಕ ದ್ವೀಪಗಳು ಮತ್ತು ವಾಯುನೆಲೆಗಳನ್ನು ನಿರ್ಮಿಸಿದಿದೆ. ಈ ವಾಯುನೆಲೆಗಳಲ್ಲಿ ಕ್ಷಿಪಣಿ ವ್ಯವಸ್ಥೆಗಳು ಮತ್ತು ಇತರ ಸಲಕರಣೆಗಳನ್ನು ಪ್ರತಿಷ್ಠಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News