ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದ ರಕ್ಷಾ ರಾಮಯ್ಯ: 50 ಸಾವಿರ ರೂ.ಗೆ ಟೊಮ್ಯಾಟೋ ಖರೀದಿ

Update: 2021-06-16 18:32 GMT

ಮಂಡ್ಯ, ಜೂ.16: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ಬೆಳೆದ ಟೊಮ್ಯಾಟೋ ಖರೀದಿಸುವ ಮೂಲಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ನೆರವಾಗಿದ್ದಾರೆ.

ತಾಲೂಕಿನ ಬಿಳದೇಗಲು ಗ್ರಾಮದ ರೈತ ಗೋಪಾಲಗೌಡ ಅವರ ಜಮೀನಿಗೆ ಬುಧವಾರ ತೆರಳಿದ ರಕ್ಷಾ ರಾಮಯ್ಯ, 1 ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಹಣ್ಣುಗಳನ್ನು 50 ಸಾವಿರ ರೂ.ಗೆ ಖರೀದಿಸಿ ರೈತನಿಗೆ ಆತ್ಮಸ್ಥೈರ್ಯ ತುಂಬಿದರು. ಇದೇ ವೇಳೆ ಆಲಕೆರೆ ಗ್ರಾಮದ ಆಲೆಮನೆಯಿಂದ ಬೆಲ್ಲ ಖರೀದಿಸಿದರು.

ನಂತರ ಮಾತನಾಡಿದ ರಕ್ಷಾ ರಾಮಯ್ಯ ಅವರು, ಕೋವಿಡ್ ಸಮಯದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನೆರವಿಗೆ ಬರಬೇಕಾದ ಸರಕಾರ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಬೇಕೆಂದ ಉದ್ದೇಶದಿಂದ ಯುವ ಕಾಂಗ್ರೆಸ್ ಗೋಗಾಲಗೌಡರ ಟೊಮ್ಯಾಟೋವನ್ನು ಖರೀದಿಸಿ ಬಡವರಿಗೆ ವಿತರಣೆ ಮಾಡಲು ಮುಂದಾಗಿದೆ ಎಂದು ಅವರು ಹೇಳಿದರು.

ಆಹಾರ ಕಿಟ್ ವಿತರಣೆ: ನಂತರ ಮಂಡ್ಯದ ಸಿಹಿನೀರು ಕೊಳದಲ್ಲಿ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ರಶ್ಮಿ ಶಿವಕುಮಾರ್ ನೇತೃತ್ವದಲ್ಲಿ ಕೊರೋನ ವಾರಿಯರ್ಸ್ ಗೃಹ ರಕ್ಷಕದಳ ಸಿಬ್ಬಂದಿಗೆ ರಕ್ಷಾ ರಾಮಯ್ಯ ಆಹಾರಧಾನ್ಯ ಕಿಟ್ ವಿತರಿಸಿ ಕೋವಿಡ್‍ನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸಿದವರನ್ನು ಸನ್ಮಾನಿಸಿದರು.

ಲಾಕ್‍ಡೌನ್ ಮತ್ತು ಸೀಲ್‍ಡೌನ್ ದಿನಗಳಲ್ಲಿ ಬಡವರು ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಜನರಿಗೆ ಯಾವುದೇ ನೆರವು, ಸೌಲಭ್ಯಗಳನ್ನು ನೀಡಿ ಅವರ ನೋವಿಗೆ ಸ್ಪಂದಿಸದ ಸರಕಾರಗಳು ಬಹುಬೇಗ ತೊಲಗಲಿ ಎಂದು ಅವರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಶ್ಮಿ ಶಿವಕುಮಾರ್ ಮಾತನಾಡಿ, ಮನುಷ್ಯ ಮನುಷ್ಯರಿಗೆ ನೆರವಾಗುವುದು ಮಾನವೀಯತೆಯಾಗಿದೆ. ಸ್ಥಳೀಯ 250 ಬಡವರಿಗೆ ತಾತ್ಕಾಲಿಕ ಅಹಾರ ಪದಾರ್ಥಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ನೆರವು ನೀಡುತ್ತೇವೆ ಎಂದರು.

ಇದೇ ವೇಳೆ ಕೊರೋನ ವಾರಿಯರ್ಸ್ ಗಳಾದ ಮಂಡ್ಯ ಪಶ್ಚಿಮ ಠಾಣೆ ಹಾಗೂ ಕೆರಗೋಡು ಪೊಲೀಸ್ ಠಾಣೆಯ ಸಿಬ್ಬಂದಿಗೆ ಯುವ ಕಾಂಗ್ರೆಸ್‍ನ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ಅಭಿಯಾನದಡಿ ಸ್ಯಾನಿಟೈಸರ್, ಮಾಸ್ಕ್ ವಿತರಿಸಲಾಯಿತು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್..ಬಿ.ವಿಜಯ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಸಿಂಗ್, ಪ್ರಧಾನ ಕಾರ್ಯದರ್ಶಿ ಚೈತ್ರ, ಪ್ರದೀಪ್, ರಾಜೇಶ್, ಜಿಲ್ಲಾದ್ಯಕ್ಷ ಎಚ್.ಬಿ.ವಿಜಯಕುಮಾರ್, ಉಪಾಧ್ಯಕ್ಷ ಸಂತೋಷ್‍ ಕುಮಾರ್, ಜಬೀಉಲ್ಲಾ, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News