ವಿಜಯೇಂದ್ರ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್‍ಬ್ಯಾಕ್ ಪಡೆದಿದ್ದಾರೆ: ಎಚ್.ವಿಶ್ವನಾಥ್ ಗಂಭೀರ ಆರೋಪ

Update: 2021-06-18 13:09 GMT

ಬೆಂಗಳೂರು, ಜೂ. 18: `ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು' ಎಂದು ನಿನ್ನೆಯಷ್ಟೇ ಪ್ರತಿಪಾದಿಸಿದ್ದ ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 'ಕಿಕ್‍ಬ್ಯಾಕ್' ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಶುಕ್ರವಾರ ಇಲ್ಲಿನ ಶಾಸಕರ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, `ಜಲಸಂಪನ್ಮೂಲ ಇಲಾಖೆ ಚಿತ್ರದುರ್ಗ, ತುಮಕೂರು ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಪೂರೈಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸಂಬಂಧಿಸಿದ 20 ಸಾವಿರ ಕೋಟಿ ರೂ.ಮೊತ್ತದ ಟೆಂಡರ್ ನಲ್ಲಿ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿರುವುದು `ಗುತ್ತಿಗೆದಾರರ ಸರಕಾರ'(ಕಂಟ್ರ್ಯಾಕ್ಟರ್). ಈ ಯೋಜನೆಯ ಟೆಂಡರ್ ನಲ್ಲಿ ವಿಜಯೇಂದ್ರ ಶೇ.10ರಷ್ಟು ಕಮಿಷನ್ ಪಡೆದಿದ್ದಾರೆ' ಎಂದು ಆಪಾದಿಸಿದರು.

`ಭದ್ರಾ ಮೇಲ್ದಂಡೆ ಕಾಮಗಾರಿಗೆ ಹಣಕಾಸು ಇಲಾಖೆ ಅನುಮೋದನೆ ಇಲ್ಲದೆಯೇ ಟೆಂಡರ್ ಕರೆದು ತರಾತುರಿಯಲ್ಲಿ ಅಂಗೀಕರಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಆರೋಪ ನೂರಕ್ಕೆ ನೂರರಷ್ಟು ಸತ್ಯ' ಎಂದು ಸಮರ್ಥಿಸಿದ ಎಚ್.ವಿಶ್ವನಾಥ್, `ಜಾರಿ ನಿರ್ದೇಶನಾಲಯ(ಇಡಿ)ದಲ್ಲಿಯೂ ವಿಜಯೇಂದ್ರ ವಿರುದ್ಧ ದೂರು ದಾಖಲಾಗಿದ್ದು, ಅದೇ ವಿಚಾರಕ್ಕಾಗಿ ವಿಜಯೇಂದ್ರ ಪದೇ ಪದೇ ದಿಲ್ಲಿ ಯಾತ್ರೆ ನಡೆಸುತ್ತಿದ್ದಾರೆ' ಎಂದು ದಾಖಲೆಗಳನ್ನು ಬಹಿರಂಗಪಡಿಸಿದರು.

ಪ್ರಜಾಪ್ರಭುತ್ವಕ್ಕೆ ಮಾರಕ: `ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಕುಟುಂಬ ಭ್ರಷ್ಟಾಚಾರ, ಕುಟುಂಬ ರಾಜಕಾರಣ ನಿಲ್ಲಬೇಕು. ಯಡಿಯೂರಪ್ಪನವರು ಈ ಹಿಂದೆಯೇ ಜೈಲಿಗೆ ಹೋಗಿ ಬಂದಿದ್ದು, ಅವರು ಮತ್ತೊಮ್ಮೆ ಜೈಲಿಗೆ ಹೋಗಿ ಬರುತ್ತಾರೆಂಬ ಆತಂಕ ಉಂಟಾಗಿದೆ. ಜೈಲಿಗೆ ಹೋಗಬಾರದು ಎಂಬ ಕಳಕಳಿಯಿಂದ ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ವಿವಿಧ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಕಿಕ್‍ಬ್ಯಾಕ್ ಸರಕಾರ' ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರಿಗೆ 75 ವರ್ಷ ಮೀರಿದೆ. ಅವರಿಗೆ ಆಡಳಿತ ನಡೆಸಲು ಆಗುವುದಿಲ್ಲ. ವಯಸ್ಸು, ಆರೋಗ್ಯದಿಂದ ಬಳಲಿದ್ದಾರೆ. ಮೊದಲಿದ್ದ ಶಕ್ತಿ ಈಗ ಯಡಿಯೂರಪ್ಪನವರಲ್ಲಿ ಇಲ್ಲ. ಮುಂಬರುವ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ನನಗೆ ಬಿಎಸ್‍ವೈ ಅವರ ವಿರುದ್ಧ ಯಾವುದೇ ದುರುದ್ದೇಶವಿಲ್ಲ. ಭವಿಷ್ಯದ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಮಾಡಬೇಕು' ಎಂದು ಎಚ್.ವಿಶ್ವನಾಥ್ ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನಾನು ಕಾರಣ. ನನಗೆ ಅಧಿಕಾರದ ಆಸೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ ಎಚ್.ವಿಶ್ವನಾಥ್, '17 ಮಂದಿಯಿಂದ ಬಿಜೆಪಿ ಹಾಳಾಗಿದೆ' ಎಂದ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕಾಮನ್‍ಸೆನ್ಸ್ ಇಲ್ಲ. ಈಶ್ವರಪ್ಪ ಅವರು ಕುಟುಂಬ ರಾಜಕಾರಣಿ. ಸಿಎಂ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರು ನೀಡಿದ ಈಶ್ವರಪ್ಪನವರಿಗೆ ನಮ್ಮ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯ ತೋರಣಗಲ್‍ನಲ್ಲಿ ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ವಿಚಾರಕ್ಕೆ ಮೊದಲು ಧ್ವನಿ ಎತ್ತಿದ್ದೇ ನಾನು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಕಿಕ್‍ಬ್ಯಾಕ್ ಪಡೆದು ಸುಮ್ಮನಿದ್ದಾರೆ ಎಂದು ದೂರಿದ ಎಚ್.ವಿಶ್ವನಾಥ್, ರಾಜ್ಯದಲ್ಲಿ ಮೂರು ಪಕ್ಷಗಳು ಅಧಿಕಾರ ನಡೆಸುತ್ತಿವೆ ಎಂಬ ಸಚಿವ ಸಿ.ಪಿ ಯೋಗೀಶ್ವರ್ ಹೇಳಿದ್ದು ಸತ್ಯವಾಗಿದೆ' ಎಂದು ಹೇಳಿದರು.

ರೇಣುಕಾಚಾರ್ಯ ಮತ್ತು ಹಾಲಪ್ಪ ತಮ್ಮ ಹಳೆಯ ವಿಚಾರಗಳನ್ನು ಮರೆತಿರುವಂತಿದೆ. ನನ್ನನ್ನು ಅರೆಹುಚ್ಚ ಎಂದಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, 10 ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಲ್ಲಿ ಎಷ್ಟು ಮೊತ್ತದ ಹಣ ಹೊಡೆದಿದ್ದಿಯಾ ನೆನಪಿದೆಯೇ?' ಎಂದು ತಿರುಗೇಟು ನೀಡಿದರು.

ನಾಯಕತ್ವ ಬದಲಾವಣೆಗೆ ಶೇ. 80 ಶಾಸಕರ ಆಗ್ರಹ

ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಸಮಾಲೋಚನೆ ನಡೆಸಿದ ಶೇ.80ರಷ್ಟು ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. ಆದರೆ, ಅವರು ಬಹಿರಂಗವಾಗಿ ಹೇಳುವುದು ಬೇರೆ. ಎಲ್ಲರಿಗೂ ಎಲ್ಲವನ್ನೂ ಮಾತನಾಡುವ ಧೈರ್ಯ ಇಲ್ಲ. ನನಗೆ ಯಾರ ಭಯವೂ ಇಲ್ಲ. ಹೀಗಾಗಿ ಮಾತನಾಡುತ್ತಿದ್ದೇನೆ.

-ಎಚ್.ವಿಶ್ವನಾಥ್, ಮೇಲ್ಮನೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News