"ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರಕಾರ ಬದ್ಧ"

Update: 2021-06-18 18:02 GMT

ಹೊಸದಿಲ್ಲಿ, ಜೂ. 18: ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ಒದಗಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ದೇಶದ 1 ಲಕ್ಷ ‘ಫ್ರಂಟ್ ಲೈನ್ ಕೊರೋನ ವಾರಿಯರ್ಸ್’ಗಳ ಕೌಶಲ ವೃದ್ಧಿಸುವ ಉದ್ದೇಶದಿಂದ ವಿನ್ಯಾಸಗೊಳಿಸಿರುವ ‘ತ್ವರಿತಗತಿಯ ತರಬೇತಿ ಕಾರ್ಯಕ್ರಮ’ (ಕಸ್ಟಮೈಸ್ಡ್ ಕ್ರಾಸ್ ಕೋರ್ಸ್ ಪ್ರೋಗ್ರಾಂ) ವನ್ನು ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಕೊರೋನ ಎರಡನೇ ಅಲೆ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ. ಇದನ್ನು ಗಮನದಲ್ಲಿ ಇರಿಸಿ ದೇಶದಲ್ಲಿರುವ 1 ಲಕ್ಷ ‘ಫ್ರಂಟ್ ಲೈನ್ ಕೊರೋನ ವಾರಿಯರ್ಸ್’ಗೆ ಈ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಪ್ರಸ್ತುತ ಹಾಗೂ ಭವಿಷ್ಯದ ಅಗತ್ಯವನ್ನು ಪೂರೈಸಲು ನುರಿತ ವೈದ್ಯಕೀಯೇತರ ಕಾರ್ಯಕರ್ತರನ್ನು ಸಿದ್ದಗೊಳಿಸುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ ಎಂದು ಅವರು ಹೇಳಿದರು.

ಈ ಕ್ರಾಸ್‌ ಕೋರ್ಸ್ ಅನ್ನು ತಜ್ಞರು ವಿನ್ಯಾಸಗೊಳಿಸಿದ್ದಾರೆ. ಈ ಕೋರ್ಸ್ನಲ್ಲಿ ಕೋವಿಡ್ ವಿರುದ್ಧ ಹೋರಾಡಲು ‘ಫ್ರಂಟ್ ಲೈನ್ ಕೊರೋನ ವಾರಿಯರ್ಸ್’ ಗೆ ತರಬೇತಿ ನೀಡಲಾಗುವುದು. ಈ ಕೋರ್ಸ್ 2ರಿಂದ 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು. ಈ ಕೋರ್ಸ್ನಲ್ಲಿ ಆರು ವಿವಿಧ ಉದ್ಯೋಗಗಳಿಗೆ ನೆರವಾಗುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಮನೆಯಲ್ಲಿ ಆರೈಕೆ, ಪ್ರಾಥಮಿಕ ಆರೈಕೆ, ಸುಧಾರಿಸಿದ ನಂತರದ ಆರೈಕೆ, ತುರ್ತು ಆರೈಕೆ, ಮಾದರಿ ಸಂಗ್ರಹ ಹಾಗೂ ವೈದ್ಯಕೀಯ ಉಪಕರಣಗಳ ಬಳಕೆಯ ಕುರಿತ ತರಬೇತಿಯನ್ನು ಈ ಕೋರ್ಸ್ ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News