ಕೊಡಗಿನ ವಿವಿಧೆಡೆ ಮುಂದುವರಿದ ಮಳೆ: ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

Update: 2021-06-18 18:22 GMT

ಮಡಿಕೇರಿ, ಜೂ.18: ಕೊಡಗು ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದೆ. ಇಂದು ಕೂಡ ಕೆಲವು ಕಡೆ ಮರ, ಬರೆ ಬಿದ್ದ ಘಟನೆ ನಡೆದಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.

ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕೊಡಗಿನ ಬಹುತೇಕ ಕಡೆ ಧಾರಕಾರವಾಗಿ ಮಳೆ ಸುರಿದಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ, ಶಾಂತಳ್ಳಿ ಮತ್ತು ಕೊಡಿಪೇಟೆಯಲ್ಲಿ ಉತ್ತಮ ಮಳೆಯಾಗಿದ್ದು, ಭಾರೀ ಗಾಳಿಗೆ ಮರಗಳು ಧರೆಗುರುಳಿವೆ.

ಮಡಿಕೇರಿಯಲ್ಲಿ ಮಳೆ ಕೊಂಚ ಬಿಡುವು ನೀಡಿತ್ತಾದರೂ ಗಾಳಿ ಮತ್ತು ಮೈಕೊರೆಯುವ ಚಳಿ ಮುಂದುವರೆದಿದೆ. ನಗರದ ಹೃದಯ ಭಾಗದಲ್ಲಿ ಬೃಹತ್ ಬರೆ, ನವೋದಯ ಶಾಲೆಯ ಬಳಿ ಮರ ಬಿದ್ದ ಘಟನೆ ನಡೆದಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.  

ವೀರಾಜಪೇಟೆ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಹೆಗ್ಗಳ ಗ್ರಾಮದ ರಾಮನಗರದ ಮಾಯಿಲಮಕ್ಕಿ ಎನ್ನುವ ಪ್ರದೇಶದಲ್ಲಿ ಬರೆಗಳು ಬೀಳುತ್ತಿವೆ.  ಸಹಾಯಕ ನೋಡಲ್ ಅಧಿಕಾರಿ ಅವರೊಂದಿಗೆ ಕಂದಾಯ ಅಧಿಕಾರಿ ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಕೆಲವು ಕುಟುಂಬಗಳಿಗೆ ನೋಟೀಸ್ ನೀಡಿ ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. 

ಪ್ರವಾಹ ಮುನ್ನೆಚ್ಚರಿಕೆ
ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ತಕ್ಷಣ ಕಾರ್ಯಚರಣೆ ಕೈಗೊಂಡು ಜನ-ಜಾನುವಾರು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳಗಳಬೇಕಾದ ಕ್ರಮಗಳ ಬಗ್ಗೆ ಎನ್‍ಡಿಆರ್‍ಎಫ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ವತಿಯಿಂದ ‘ಅಣಕು ಪ್ರದರ್ಶನ'ವು ಹಾರಂಗಿ ಜಲಾಶಯದಲ್ಲಿ ಜರುಗಿತು. 

ಪ್ರಾಕೃತಿಕ ವಿಕೋಪದಿಂದ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಕಾರ್ಯಚರಣೆ ಮಾಡಿ ಜನ-ಜಾನುವಾರುಗಳನ್ನು ಸಂರಕ್ಷಣೆ ಕೈಗೊಳ್ಳುವ ಬಗ್ಗೆ ಅಣಕು ಪ್ರದರ್ಶನವು ಗಮನ ಸೆಳೆಯಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರವಾಹ ಹಾಗೂ ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಹೇಗೆ ರಕ್ಷಣಾ ಕಾರ್ಯಚರಣೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಎನ್‍ಡಿಆರ್‍ಎಫ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಣಕು ಪ್ರದರ್ಶನ ನಡೆಸಲಾಗಿದೆ ಎಂದರು. 

ಎನ್‍ಡಿಆರ್‍ಎಫ್ ತಂಡವು ಈಗಾಗಲೇ ಜಿಲ್ಲೆಯ ತಲಕಾವೇರಿ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದೆ. ಎನ್‍ಡಿಆರ್‍ಎಫ್ ತಂಡದಲ್ಲಿ 20 ಮಂದಿ ಸಿಬ್ಬಂದಿಗಳು ಇದ್ದು, ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಅಗತ್ಯ ಕಾರ್ಯಚರಣೆ ನಡೆಸಲಿದ್ದಾರೆ. ಹಾಗೆಯೇ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅತ್ಯಗತ್ಯವಾಗಿ ಬೇಕಿರುವ ಬೋಟ್, ಜೆಸಿಬಿ ಯಂತ್ರಗಳು ಸೇರಿದಂತೆ ಅಗತ್ಯ ಯಂತ್ರಗಳು ಹಾಗೂ ಉಪಕರಣಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯವಾಗಿ ಗ್ರಾ.ಪಂ. ಮಟ್ಟದಲ್ಲಿಯೂ ಸಹ ಪ್ರಾಕೃತಿಕ ವಿಕೋಪ ಎದುರಿಸಲು ಅಗತ್ಯ ತಯಾರಿ  ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗದಂತೆ ಗಮನಹರಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಅವರು ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು 'ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತದ ಜೊತೆ ಪೊಲೀಸ್ ಇಲಾಖೆ ಕೈಜೋಡಿಸಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್, ತಹಶಿಲ್ದಾರರಾದ ಗೋವಿಂದರಾಜು, ಡಿವೈಎಸ್‍ಪಿ ಶೈಲೇಂದ್ರ, ಮಹೇಶ್, ರಾಚಯ್ಯ, ಹಾರಂಗಿ ಜಲಾಶಯದ ಎಇ ಸಿದ್ದರಾಜು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News